ಚಿತ್ರದುರ್ಗ : ತನ್ನ ಪೋಷಕರು ವಿವಾಹಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಅದನ್ನು ತಪ್ಪಿಸಿ ಎಂದು ತಾನೇ ಖುದ್ದಾಗಿ ಪೊಲೀಸ್ ಠಾಣೆಗೆ ತೆರಳಿ ಅಪ್ರಾಪ್ತ ಬಾಲಕಿಯೊಬ್ಬಳು ದೂರು ನೀಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.
ಹೆಂಡತಿ ಕಳೆದುಕೊಂಡ ವ್ಯಕ್ತಿಯೊಬ್ಬನಿಗೆ ಎರಡನೇ ಮದುವೆ ಮಾಡಲು ಪೋಷಕರು ಮುಂದಾಗಿದ್ದರು. ಇದರಿಂದ ಬಾಲಕಿ ಭಯಗೊಂಡು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾಳೆ.
‘ನನಗೆ ಈಗ 16 ವರ್ಷ. ನಾನು 8 ನೇ ತರಗತಿಯಲ್ಲಿ ಓದುತ್ತಿದ್ದಾಗ, ಪೊಲೀಸ್ ಸಿಬ್ಬಂದಿಗಳು ಶಾಲೆಗೆ ಆಗಮಿಸಿ ಬಾಲ್ಯ ವಿವಾಹದಲ್ಲಿಅನುಭವಿಸಬೇಕಾದ ತೊಂದರೆ, ಮಾನಸಿಕ, ದೈಹಿಕ ಅಸಮಾತೋಲನದಿಂದ ಆಗುವ ಅನಾನುಕೂಲ, ಮುಂಬರುವ ದಿನಗಳಲ್ಲಿ ಬಂದೊದಗಬಹುದಾದ ತೋದರೆಗಳ ಬಗ್ಗೆ ಜಾಗೃತಿ ಮೂಡಿಸಿದ್ದರು. ಅಂದು ಶಾಲೆಯಲ್ಲಿ ಕೇಳಿದ್ದ ಪೊಲೀಸರ ಬುದ್ದಿ ಮಾತು ನೆನಪಾಗಿ ನೇರವಾಗಿ ಪೊಲೀಸ್ ಠಾಣೆಗೆ ಬಂದಿರುವಾಗಿ ಬಾಲಕಿಯು ಪಿಎಸ್‌ಐ ಮಹೇಶ್ ಲಕ್ಷ್ಮಣ್ ಹೊಸಪೇಟ ಸಮ್ಮುಖದಲ್ಲಿ ತನ್ನ ನೋವನ್ನು ಹೇಳಿಕೊಂಡಿದ್ದಾಳೆ.
”ನನ್ನ ಹೆಸರು ಅರ್ಚನಾ (ಹೆಸರು ಬದಲಾಯಿಸಲಾಗಿದೆ) ನಾನು ಶಾಲೆ ಬಿಟ್ಟು ಮನೆಯಲ್ಲಿದ್ದೇನೆ. ನಮ್ಮ ಅಪ್ಪ, ಅಮ್ಮ ಹಾಗೂ ಅಣ್ಣ ನನಗೆ ಮದುವೆ ಮಾಡಲು ಮುಂದಾಗಿದ್ದು, ಮದುವೆ ಮಾಡಲು ಆಗಸ್ಟ್ 17 ರಂದು ದಿನಾಂಕ ನಿಗದಿ ಮಾಡಿದ್ದಾರೆ. ನನಗೆ ಮದುವೆಯಾಗಲು ಈಗಲೇ ಇಷ್ಟವಿಲ್ಲ. ಆದರೂ ನನ್ನ ಪೋಷಕರು ಬಲವಂತ ಮಾಡುತ್ತಿದ್ದಾರೆ ” ಎಂದು ತಿಳಿಸಿದ್ದಾಳೆ.
ನಂತರ ಪಿಎಸ್ಐ ಮಹೇಶ್ ಹೊಸಪೇಟೆ, ತಾಲ್ಲೂಕು ಸಿಡಿಪಿಒ ನವೀನ್ ಕುಮಾರ್, ಹುಡುಗಿಯ ಪೋಷಕರನ್ನು ಕರೆಸಿ ಮದುವೆಯನ್ನು ನಿಲ್ಲಿಸುವಂತೆ ಸೂಚಿಸಿದ್ದಾರೆ. ಈ ನಡುವೆ, ಪುನರ್ವಸತಿ ಯೋಜನೆಯ ಪ್ರಕಾರ ಬಾಲಕಿಯನ್ನು ಚಿತ್ರದುರ್ಗದಲ್ಲಿರುವ ಸರ್ಕಾರಿ ಗೃಹಕ್ಕೆ ಕಳುಹಿಸಿ ಬಾಲಕಿಯನ್ನು ಬಾಲ್ಯ ವಿವಾಹದಿಂದ ರಕ್ಷಿಸಲಾಗಿದೆ.