ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ 2ನೇ ಟೆಸ್ಟ್ ನಲ್ಲಿ ಅಮೋಘ ದ್ವಿಶತಕ ಸಿಡಿಸುವ ಮೂಲಕ ಭಾರತೀಯರ ದಿಲ್ ಗೆದ್ದಿದ್ದಾರೆ.
ನಾಯಕ ಶುಭಮನ್ ಗಿಲ್ (Shubman Gill) ಸ್ಮರಣೀಯ ದ್ವಿಶತಕ (Double century) ಸಿಡಿಸಿದ್ದಾರೆ. ಈ ಮೂಲಕ ಹಲವು ದಾಖಲೆ ಪುಡಿ ಪುಡಿ ಮಾಡಿದ್ದಾರೆ. ಈ ಪಂದ್ಯದಲ್ಲಿ ಗಿಲ್ 387 ಬಾಲ್ ಗಳಲ್ಲಿ 269 ರನ್ ಗಳಿಸಿದ್ದಾರೆ. ಈ ವೇಳೆ 30 ಬೌಂಡರಿ ಸಿಡಿಸಿ, 3 ಸಿಕ್ಸರ್ ಸಿಡಿಸಿದ್ದಾರೆ.
ನಾಯಕರಾದ ಚೊಚ್ಚಲ ಟೆಸ್ಟ್ ಸರಣಿಯಲ್ಲೇ (Test Series) ಚೊಚ್ಚಲ ದ್ವಿಶತಕ ಬಾರಿಸಿದ್ದಾರೆ. 18 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಇಂಗ್ಲೆಂಡ್ ನೆಲದಲ್ಲಿ 500+ ರನ್ (ಇನ್ನಿಂಗ್ಸ್‌ವೊಂದರಲ್ಲಿ) ಗಳಿಸಿದೆ. ನಾಯಕ ಶುಭಮನ್ ಗಿಲ್ ಕೇವಲ ಮೂರೇ ಇನ್ನಿಂಗ್ಸ್‌ನಲ್ಲಿ 400ಕ್ಕೂ ಅಧಿಕ ರನ್ ಪೂರೈಸಿದ್ದಾರೆ. ಈ ಮೂಲಕ ಸುನಿಲ್ ಗವಾಸ್ಕರ್, ವಿರಾಟ್ ಕೊಹ್ಲಿ ಸೇರಿದಂತೆ ಹಲವರ ದಾಖಲೆ ಮುರಿದಿದ್ದಾರೆ.
ಇಂಗ್ಲೆಂಡ್ ನೆಲದಲ್ಲಿ ಇನ್ನಿಂಗ್ಸ್ ವೊಂದರಲ್ಲಿ ಅತ್ಯಧಿಕ ರನ್ ಗಳಿಸಿದ ಭಾರತದ ಆಟಗಾರನೆಂಬ ದಾಖಲೆ ನಿರ್ಮಿಸಿದ್ದಾರೆ. ಮೊದಲ ಇನ್ನಿಂಗ್ಸ್ ನಲ್ಲಿ 222 ರನ್ ಬಾರಿಸಿದ ನಂತರ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅವರ ದಾಖಲೆ ಮುರಿದಿದ್ದಾರೆ. ಗವಾಸ್ಕರ್ 221 ರನ್ ಗಳಿಸಿ ಈ ದಾಖಲೆ ನಿರ್ಮಿಸಿದ್ದರು.
1979 ರಲ್ಲಿ ದಿ ಓವಲ್ನಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್‌ವೊಂದರಲ್ಲೇ ಗವಾಸ್ಕರ್ 221 ರನ್ ಕಲೆಹಾಕಿದ್ದರು. 222 ರನ್ಗಳ ಗಡಿ ದಾಟಿರುವ ಗಿಲ್, ಗವಾಸ್ಕರ್ ಅವರ 46 ವರ್ಷಗಳ ಹಿಂದಿನ ದಾಖಲೆ ಮುರಿದಿದ್ದಾರೆ. ಕನ್ನಡಿಗ ರಾಹುಲ್ ದ್ರಾವಿಡ್ 2002 ರಲ್ಲಿ ದಿ ಓವಲ್ನಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ 217 ರನ್ ಬಾರಿಸಿದ್ದರು. ಸಚಿನ್ ತೆಂಡೂಲ್ಕರ್ ಲೀಡ್ಸ್ ಟೆಸ್ಟ್ ಪಂದ್ಯದಲ್ಲಿ 193 ರನ್ ಗಳಿಸಿದ್ದರು.
ತಮ್ಮ ಇನ್ನಿಂಗ್ಸ್‌ನಲ್ಲಿ 150 ರನ್ ಪೂರ್ಣಗೊಳಿಸಿದ ಕೂಡಲೇ ಬರ್ಮಿಂಗ್ಹ್ಯಾಮ್ ಮೈದಾನದಲ್ಲಿ ಅತಿದೊಡ್ಡ ಟೆಸ್ಟ್ ಇನ್ನಿಂಗ್ಸ್ ಆಡಿದ ಭಾರತೀಯ ಎನಿಸಿದ್ದಾರೆ. 2018ರಲ್ಲಿ ಕೊಹ್ಲಿ ಬರ್ಮಿಂಗ್ಹ್ಯಾಮ್ ಮೈದಾನದಲ್ಲೇ ಇನ್ನಿಂಗ್ಸ್‌ವೊಂದರಲ್ಲಿ 149 ರನ್ ಗಳಿಸಿದ್ದರು.
ಇಂದು ದ್ವಿಶತಕ ಸಿಡಿಸುವ ಮೂಲಕ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ರೋಹಿತ್ ಶರ್ಮಾ ನಂತರ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿದ ಭಾರತೀಯ ಆಟಗಾರ ಎಂಬ ದಾಖಲೆಯನ್ನೂ ಗಿಲ್ ಬರೆದಿದ್ದಾರೆ.