ಎರಡು ಬಾರಿಯ ಒಲಿಂಪಿಕ್ಸ್ ವಿಜೇತೆ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಗೆಲುವಿನ ಶುಭಾರಂಭ ಮಾಡಿದ್ದಾರೆ.
ಇಂದು ನಡೆದ ಮಹಿಳಾ ಸಿಂಗಲ್ಸ್ ಗುಂಪು ಹಂತದ ಮೊದಲ ಪಂದ್ಯದಲ್ಲಿ ಮಾಲ್ಡೀವ್ಸ್‌ನ ಫಾತಿಮತ್ ಅಬ್ದುಲ್ ರಜಾಕ್ ರನ್ನು ಸೋಲಿಸುವುದರ ಮೂಲಕ ಗೆಲುವಿನ ನಗೆ ಬೀರಿದ್ದಾರೆ. ಎಂ ಗುಂಪಿನಲ್ಲಿ ಸ್ಥಾನ ಪಡೆದಿರುವ ಸಿಂಧು, ಫಾತಿಮಾತ್ ಅವರನ್ನು 21-9 21-6 ನೇರ ಗೇಮ್‌ಗಳಲ್ಲಿ ಕೇವಲ 29 ನಿಮಿಷಗಳಲ್ಲಿ ಮಣಿಸಿದ್ದಾರೆ.
ಕೇವಲ 13 ನಿಮಿಷಗಳಲ್ಲಿ ಮೊದಲ ಗೇಮ್ ಗೆದ್ದ ಮಾಜಿ ವಿಶ್ವ ಚಾಂಪಿಯನ್ ಸಿಂಧುಗೆ ತಿರುಗೇಟು ನೀಡಲು ವಿಶ್ವದ 111ನೇ ಶ್ರೇಯಾಂಕಿತೆ ಫಾತಿಮಾತ್ಗೆ ಸಾಧ್ಯವಾಗಲಿಲ್ಲ. ಎರಡನೇ ಗೇಮ್ ನಲ್ಲಿಯೂ ಸಿಂಧು ಅಮೋಘ ಆರಂಭ ನೀಡಿ 4-0 ಮುನ್ನಡೆ ಸಾಧಿಸಿದರಾದರೂ ಫಾತಿಮಾತ್ ತಿರುಗೇಟು ನೀಡಿ ಸ್ಕೋರ್ ಅನ್ನು 3-4ಕ್ಕೆ ತೆಗೆದುಕೊಂಡು ಹೋದರು.
ಸಿಂಧು ಸತತ ಆರು ಅಂಕಗಳನ್ನು ಸಂಪಾಧಿಸಿ 10-3 ರಿಂದ ಮುನ್ನಡೆ ಸಾಧಿಸಿದರು. 14 ಮ್ಯಾಚ್ ಪಾಯಿಂಟ್ ಗಳನ್ನು ಪಡೆದ ಸಿಂಧು ಮೊದಲ ಪ್ರಯತ್ನದಲ್ಲಿಯೇ ಪಾಯಿಂಟ್ ಗೆಲ್ಲುವ ಮೂಲಕ ಗೇಮ್ ಮತ್ತು ಪಂದ್ಯ ಗೆದ್ದರು.

2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಮತ್ತು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ 10ನೇ ಶ್ರೇಯಾಂಕಿತೆ ಸಿಂಧು, ಬುಧವಾರ ನಡೆಯಲಿರುವ ಗುಂಪಿನ ಎರಡನೇ ಪಂದ್ಯದಲ್ಲಿ ವಿಶ್ವದ 75ನೇ ಶ್ರೇಯಾಂಕದ ಎಸ್ಟೋನಿಯಾದ ಕ್ರಿಸ್ಟಿನ್ ಕುಬಾರನ್ನು ಎದುರಿಸಲಿದ್ದಾರೆ. ಸಿಂಧು ಮುಂದಿನ ಪಂದ್ಯ ಗೆದ್ದರೆ 16ರ ಘಟ್ಟ ತಲುಪಲಿದ್ದಾರೆ.
ಈ ಸುತ್ತಿನಲ್ಲಿ ಸಿಂದು ಅವರು ಚೀನಾದ ವಿಂಗ್ಜಿಯಾವೊರನ್ನು ಎದುರಿಸುವ ಸಾಧ್ಯತೆ ಹೆಚ್ಚಿದೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸಿಂಧು ಕಂಚಿನ ಪದಕ ಗೆದ್ದಿದ್ದು ಹೀ ವಿರುದ್ಧವೇ. ಒಂದು ವೇಳೆ ಸಿಂಧು ಕ್ವಾರ್ಟರ್ ಫೈನಲ್‌ಗೆ ತಲುಪಿದರೆ, ಅಲ್ಲಿ ಟೋಕಿಯೊ ಒಲಿಂಪಿಕ್ಸ್‌ನ ಚಿನ್ನದ ಪದಕ ವಿಜೇತರನ್ನು ಎದುರಿಸಬಹುದು. ಕಠಿಣ ಸವಾಲು ಎದುರಿಸು ಸಿಂಧು ಫೈನಲ್ ತಲುಪುವರೇ ಎಂಬುವುದನ್ನು ಕಾಯ್ದು ನೋಡಬೇಕಿದೆ.