ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಐದು ನಗರ ಪಾಲಿಕೆಗಳ ಆಯವ್ಯಯಗಳಿಗೆ ತೀವ್ರ ಟೀಕೆ ವ್ಯಕ್ತವಾಗಿದೆ. ವಾಸ್ತವಿಕ ಆದಾಯ ಮೂಲಗಳಿಗೆ ಹೊಂದಿಕೆಯಾಗದಂತೆ 20,220.58 ಕೋಟಿ ರೂ. ಮೊತ್ತದ ಬಜೆಟ್ ಮಂಡನೆಯಾಗಿರುವುದು ಭ್ರಮಾ ಲೋಕದ ಕನಸು ಎಂದು ಬಿಜೆಪಿ ಮುಖಂಡ ಎನ್. ಆರ್. ರಮೇಶ್ ಆರೋಪಿಸಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆಗೊಳಿಸಿರುವ ಅವರು, ಮಾರ್ಚ್ 27 ಮತ್ತು 28ರಂದು ಐದು ನಗರ ಪಾಲಿಕೆಗಳ ಆಯುಕ್ತರುಗಳು ಒಟ್ಟಾರೆ 20,220.58 ಕೋಟಿ ರೂ. ಮೊತ್ತದ ಆಯವ್ಯಯಗಳನ್ನು ಮಂಡಿಸಿರುವುದು “ವಾಸ್ತವಿಕತೆಯಿಂದ ದೂರವಾದ ಕಲ್ಪಿತ ಅಂದಾಜು” ಎಂದು ಟೀಕಿಸಿದ್ದಾರೆ. ಈ ಕುರಿತು ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ಮೇಲೂ ಪ್ರಶ್ನೆ ಎತ್ತಿದ್ದಾರೆ.
ವಾಸ್ತವ ಆದಾಯ ಮೂಲಗಳನ್ನು ಪರಿಗಣಿಸದೇ ಇಂತಹ ಬೃಹತ್ ಬಜೆಟ್‌ಗಳನ್ನು ಮಂಡಿಸಿರುವುದು ಸರಿಯಲ್ಲ, 5 ಪಾಲಿಕೆಗಳಿಗೆ ಆಸ್ತಿ ತೆರಿಗೆ, ಪರವಾನಗಿ ಶುಲ್ಕ ಸೇರಿದಂತೆ ವಿವಿಧ ಮೂಲಗಳಿಂದ ಗರಿಷ್ಠ 5,800 ಕೋಟಿ ರೂ. ಮತ್ತು ರಾಜ್ಯ ಸರ್ಕಾರದಿಂದ 7,000 ಕೋಟಿ ರೂ. ಅನುದಾನ ಸಿಕ್ಕರೂ ಒಟ್ಟು ಆದಾಯ 12,800 ಕೋಟಿ ರೂ. ಅನ್ನು ಮೀರುವುದಿಲ್ಲ. ಆದರೆ, ಇದನ್ನು ಮೀರಿ 20,000 ಕೋಟಿ ರೂ.ಗೂ ಅಧಿಕ ಮೊತ್ತದ ಆಯವ್ಯಯ ಮಂಡಿಸಿರುವುದು ಅಸಾಧ್ಯ ನಿರೀಕ್ಷೆಗಳ ಪ್ರತೀಕವಾಗಿದೆ ಎಂದು ಎನ್.ಆರ್. ರಮೇಶ್ ಆರೋಪಿಸಿದ್ದಾರೆ.
ಕೇಂದ್ರ ನಗರ ಪಾಲಿಕೆಯು 3,427.34 ಕೋಟಿ ರೂ. ಉತ್ತರ ನಗರ ಪಾಲಿಕೆಯು 4,344 ಕೋಟಿ ರೂ. ದಕ್ಷಿಣ ನಗರ ಪಾಲಿಕೆಯು 3,826.43 ಕೋಟಿ ರೂ. ಪೂರ್ವ ನಗರ ಪಾಲಿಕೆಯು 3,890 ಕೋಟಿ ರೂ ಮತ್ತು ಪಶ್ಚಿಮ ನಗರ ಪಾಲಿಕೆ 4,732.81 ಕೋಟಿ ರೂ. ಮೊತ್ತಗಳ ಆಯವ್ಯಯಗಳನ್ನು ಮಂಡಿಸುವ ಮೂಲಕ ಬೆಂಗಳೂರು ನಾಗರಿಕರನ್ನು ಸರ್ಕಾರ ಭ್ರಮಾ ಲೋಕಕ್ಕೆ ಕರೆದೊಯ್ದಿದ್ದಾರೆ.
ವಿಶೇಷವಾಗಿ ಜಾಹೀರಾತು ಶುಲ್ಕದಿಂದ ನೂರಾರು ಕೋಟಿ ಆದಾಯ ನಿರೀಕ್ಷಿಸಿರುವುದು ಹಾಗೂ ‘ಬಿ’ ಖಾತೆಯಿಂದ ‘ಎ’ ಖಾತಾಗೆ ಪರಿವರ್ತನೆಯ ಮೂಲಕ ಸಾವಿರಾರು ಕೋಟಿ ಸಂಗ್ರಹಿಸುವ ಗುರಿ ಇಟ್ಟಿರುವುದು ವಾಸ್ತವಿಕತೆಯ ವಿರುದ್ಧವಾಗಿದೆ ಎಂದು ತಿಳಿಸಿದ್ದಾರೆ.
ಅನುದಾನಗಳ ಹಂಚಿಕೆಯಲ್ಲಿ ತಾರತಮ್ಯ
ಇದೇ ವೇಳೆ ವಾರ್ಡ್‌ಗಳಿಗೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಪೂರ್ವ, ಕೇಂದ್ರ ಹಾಗೂ ದಕ್ಷಿಣ ಪಾಲಿಕೆಗಳ ವಾರ್ಡ್‌ಗಳಿಗೆ ಹೆಚ್ಚು ಅನುದಾನ ನೀಡಲಾಗಿದ್ದು, ಪಶ್ಚಿಮ ಮತ್ತು ಉತ್ತರ ಪಾಲಿಕೆಗಳ ವಾರ್ಡ್‌ಗಳಿಗೆ ಕಡಿಮೆ ಮೀಸಲು ನೀಡಲಾಗಿದೆ ಎಂದು ಆಕ್ಷೇಪಿಸಿದ್ದಾರೆ.
ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ಪ್ರತೀ ವಾರ್ಡ್ ನ ಅಭಿವೃದ್ಧಿ ಕಾರ್ಯಗಳಿಗೆಂದು ತಲಾ 2.50 ಕೋಟಿ ರೂ. ಕೇಂದ್ರ ನಗರ ಪಾಲಿಕೆ ಮತ್ತು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ಗಳಿಗೆ ತಲಾ 2.25 ಕೋಟಿ ರೂ. ಗಳಂತೆ ಮೀಸಲಿಡಲಾಗಿದೆ. ಆದರೆ, ಪಶ್ಚಿಮ ನಗರ ಪಾಲಿಕೆ ಮತ್ತು ಉತ್ತರ ನಗರ ಪಾಲಿಕೆಗಳ ವ್ಯಾಪ್ತಿಯ ವಾರ್ಡ್ ಗಳ ಅಭಿವೃದ್ಧಿ ಕಾರ್ಯಗಳಿಗೆಂದು ತಲಾ ಕೇವಲ 1.50 ಕೋಟಿ ರೂ. ಗಳಷ್ಟನ್ನು ಮಾತ್ರವೇ ಮೀಸಲಿಡುವ ಮೂಲಕ ತಾರತಮ್ಯ ಮಾಡಲಾಗಿದೆ ಎಂದು ಆಕ್ರೋಶಿಸಿದ್ದಾರೆ.
ಬೆಂಗಳೂರಿನ ಎಲ್ಲಾ 05 ನಗರ ಪಾಲಿಕೆಗಳ ವ್ಯಾಪ್ತಿಯ ನಾಗರಿಕರು ಒಂದೇ ಮಾದರಿಯ ಮತ್ತು ಸಮಾನ ರೂಪದ “ರಸ್ತೆ ತೆರಿಗೆ”, “ಮಾರಾಟ ತೆರಿಗೆ”, “ಅಬಕಾರಿ ತೆರಿಗೆ”ಗಳನ್ನು ರಾಜ್ಯ ಸರ್ಕಾರಕ್ಕೆ ಹಾಗೂ “ಆಸ್ತಿ ತೆರಿಗೆ”ಯನ್ನು ಪಾಲಿಕೆಗಳಿಗೆ ಪಾವತಿಸುತ್ತಿದ್ದಾರೆ. ಹಾಗಿದ್ದರೂ ಸಹ ಇಂತಹ ತಾರತಮ್ಯ ಮಾಡುವ ಮೂಲಕ ಈ ಎರಡು ನಗರ ಪಾಲಿಕೆಗಳ ನಾಗರೀಕರಿಗೆ ಮಹಾ ಅನ್ಯಾಯ ಮಾಡಲಾಗಿದೆ ಎಂದು ಎನ್ ಆರ್ ರಮೇಶ್ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಂಬಂಧಿತ ಅಧಿಕಾರಿಗಳಿಗೆ ಎನ್. ಆರ್ ರಮೇಶ್ ಪತ್ರ ಬರೆದು ಪ್ರಶ್ನೆ ಕೇಳಿದ್ದಾರೆ.


















