ಭಾರತ ಕ್ರಿಕೆಟ್ ತಂಡವು ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದು, ಐದು ಪಂದ್ಯಗಳ ಪ್ರತಿಷ್ಠಿತ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಆಡುತ್ತಿದೆ. ಮೊದಲ ಪಂದ್ಯವನ್ನು ಗೆದ್ದುಕೊಳ್ಳುವ ಮೂಲಕ ಗೆಲುವಿನ ಶುಭಾರಂಭ ಮಾಡಿದ್ದ ಭಾರತ ತಂಡ ಆನಂತರ ಹೀನಾಯ ಪ್ರದರ್ಶನ ತೋರುತ್ತಿದೆ. ಇದರಿಂದಾಗಿ ಕೋಚ್ ಗೌತಮ್ ಗಂಭೀರ್ ಕೆಂಡಾಮಂಡಲವಾಗಿದ್ದಾರೆ.
ಭಾರತ ತಂಡ ಕಳೆದ 3 ಪಂದ್ಯಗಳಲ್ಲಿ 2ರಲ್ಲಿ ಸೋತಿದ್ದು, ಒಂದು ಪಂದ್ಯ ಡ್ರಾ ಆಗಿದೆ. ಇಡೀ ಸರಣಿಯಲ್ಲಿ ತಂಡ ಸ್ಥಿರ ಪ್ರದರ್ಶನ ನೀಡುವಲ್ಲಿ ಎಡವಿದೆ. ವರ್ಷದ ಮೊದಲ ದಿನವೇ ಆಘಾತಕಾರಿ ಸುದ್ದಿಯೊಂದು ಬೆಳಕಿಗೆ ಬಂದಿದ್ದು ತಂಡದ ಡ್ರೆಸ್ಸಿಂಗ್ ರೂಂನಲ್ಲಿ ನಡೆದ ಮಾತುಕತೆ ಲೀಕ್ ಆಗಿದ್ದು, ತೀವ್ರ ಸಂಚಲನ ಮೂಡಿಸಿದೆ.
ಮಾಧ್ಯಮಗಳ ವರದಿಯಂತೆ, ಡ್ರೆಸ್ಸಿಂಗ್ ರೂಂನಲ್ಲಿ ಎಲ್ಲವೂ ಸರಿಯಾಗಿಲ್ಲ ಎಂದು ಹೇಳಲಾಗುತ್ತಿದೆ. ಮುಖ್ಯ ಕೋಚ್ ಗೌತಮ್ ಗಂಭೀರ್ ತಂಡದ ಪ್ರದರ್ಶನದ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ ಎಂದು ವರದಿಯಾಗಿದೆ. ಬ್ಯಾಟಿಂಗ್ ವೈಫಲ್ಯಕ್ಕೆ ಗೌತಮ್ ಗಂಭೀರ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ ಸೇರಿದಂತೆ ಇಡೀ ಭಾರತ ತಂಡದ ಮೇಲೆ ಡ್ರೆಸ್ಸಿಂಗ್ ರೂಮಿನಲ್ಲೇ ಸಿಟ್ಟಾಗಿರುವ ಗಂಭೀರ್ ಆಟಗಾರರ ವಿರುದ್ಧ ಹರಿಹಾಯ್ದಿದ್ದಾರೆ ಎನ್ನಲಾಗಿದೆ. ಇದನ್ನು ಇಲ್ಲಿಗೆ ನಿಲ್ಲಿಸಿ. ನೀವು ಎಚ್ಚರವಾಗಿದ್ದೀರಾ ಅಥವಾ ಇಲ್ಲವಾ? ನಿಮಗೆ ಮುಕ್ತವಾಗಿ ಆಡಲು 6 ತಿಂಗಳ ಕಾಲಾವಕಾಶ ನೀಡಲಾಗಿತ್ತು. ಆದರೆ, ಇನ್ನು ಮುಂದೆ ಸರಿಯಾಗಿ ಆಡದವರನ್ನು ತಂಡದಿಂದ ಹೊರ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ.