ಬೆಂಗಳೂರು: ರಾಜಧಾನಿಯಲ್ಲಿ ಈಗಾಗಲೇ ವಾಣಿಜ್ಯ LPG ಗ್ಯಾಸ್ ಕೊರತೆ ಸಮಸ್ಯೆ ಎದುರಾಗಿರುವ ನಡುವೆಯೇ, ಇದೀಗ ಕೈಗಾರಿಕಾ ವಲಯಕ್ಕೂ ಮತ್ತೊಂದು ದೊಡ್ಡ ಸಮಸ್ಯೆ ಎದುರಾಗಿದೆ. ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಪೂರೈಕೆಯಾಗುತ್ತಿದ್ದ ಇಂಡಸ್ಟ್ರಿಯಲ್ ಗ್ಯಾಸ್ ಕೊರತೆ ಉಂಟಾಗಿರುವುದು ಕೈಗಾರಿಕೆಗಳಲ್ಲಿ ಆತಂಕ ಮೂಡಿಸಿದೆ.
ದಕ್ಷಿಣ ಏಷ್ಯಾದಲ್ಲೇ ಅತ್ಯಂತ ದೊಡ್ಡ ಕೈಗಾರಿಕಾ ಪ್ರದೇಶವೆಂದು ಖ್ಯಾತಿ ಪಡೆದಿರುವ ಪೀಣ್ಯ ಕೈಗಾರಿಕಾ ಪ್ರದೇಶದ ಹಲವು ಕೈಗಾರಿಕೆಗಳು ಇಂಡಸ್ಟ್ರಿಯಲ್ ಗ್ಯಾಸ್ ಮೇಲೆಯೇ ಅವಲಂಬಿತವಾಗಿವೆ. ವಿಶೇಷವಾಗಿ ಮೆಟಲ್ ಕಟಿಂಗ್, ವೆಲ್ಡಿಂಗ್ ಸೇರಿದಂತೆ ಹಲವು ಉತ್ಪಾದನಾ ಕಾರ್ಯಗಳಿಗೆ ಈ ಗ್ಯಾಸ್ ಅಗತ್ಯವಾಗಿದೆ.
ಈ ನಡುವೆ ಸೋಮವಾರದಿಂದ ಇಂಡಸ್ಟ್ರಿಯಲ್ ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವುದರಿಂದ, ಕೈಗಾರಿಕಾ ಚಟುವಟಿಕೆಗಳಿಗೆ ಅಡಚಣೆ ಎದುರಾಗುವ ಸಾಧ್ಯತೆ ಇದೆ. ಗ್ಯಾಸ್ ಪೂರೈಕೆ ಸರಿಯಾಗದಿದ್ದರೆ ಸುಮಾರು 6 ಸಾವಿರಕ್ಕೂ ಅಧಿಕ ಕೈಗಾರಿಕೆಗಳು ಶಟ್‌ಡೌನ್ ಆಗುವ ಭೀತಿ ವ್ಯಕ್ತವಾಗಿದೆ. ಈ ಬಗ್ಗೆ ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ ದಾನಪ್ಪ ಮಾತನಾಡಿ, ಪೀಣ್ಯದಲ್ಲಿ ಒಟ್ಟು 12 ಸಾವಿರಕ್ಕೂ ಅಧಿಕ ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳಲ್ಲಿ ಬಹುತೇಕ ಕೈಗಾರಿಕೆಗಳು ಇಂಡಸ್ಟ್ರಿಯಲ್ ಗ್ಯಾಸ್ ಮೇಲೆ ಅವಲಂಬಿತವಾಗಿವೆ ಎಂದು ತಿಳಿಸಿದ್ದಾರೆ.
ಗ್ಯಾಸ್ ಕೊರತೆ ಮುಂದುವರೆದರೆ ಉತ್ಪಾದನಾ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಇದರಿಂದ ಸಾವಿರಾರು ಕಾರ್ಮಿಕರ ಉದ್ಯೋಗಕ್ಕೂ ಪರಿಣಾಮ ಬೀರುವ ಆತಂಕ ವ್ಯಕ್ತವಾಗಿದೆ. ಇದೇ ಸಮಸ್ಯೆ ಇತರೆ ರಾಜ್ಯಗಳಲ್ಲಿ ಕಾಣಿಸಿಕೊಳ್ಳದಿದ್ದರೂ, ಕರ್ನಾಟಕದಲ್ಲಿ ಮಾತ್ರ ಏಕೆ ಈ ರೀತಿಯ ಸಮಸ್ಯೆ ಎದುರಾಗುತ್ತಿದೆ ಎಂಬ ಪ್ರಶ್ನೆಯನ್ನು ಕೈಗಾರಿಕೋದ್ಯಮಿಗಳು ಎತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಮಸ್ಯೆ ಪರಿಹಾರಕ್ಕಾಗಿ ಪೀಣ್ಯ ಕೈಗಾರಿಕಾ ಸಂಘ ಕೈಗಾರಿಕೋದ್ಯಮಿಗಳ ಜೊತೆ ಸಭೆ ನಡೆಸಿದ್ದು, ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಗ್ಯಾಸ್ ಪೂರೈಕೆ ಸರಿಪಡಿಸಬೇಕೆಂದು ಒತ್ತಾಯಿಸಿದೆ.
ಇದನ್ನೂ ಓದಿ : ಒಳ ಮೀಸಲಾತಿ ಗೊಂದಲ ಇತ್ಯರ್ಥಕ್ಕೆ ಸಚಿವರ ಸಭೆ ಕರೆದ ಸಿಎಂ ಸಿದ್ದರಾಮಯ್ಯ!



















