ನೆಲಮಂಗಲ: ಗ್ಯಾಸ್ ಲಿಕೇಜ್ ನಿಂದಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಇಬ್ಬರು ಸಾವನ್ನಪ್ಪಿ, ಮೂವರು ಗಂಭೀರವಾಗಿರುವ ಘಟನೆ ನಡೆದಿದೆ. ಮನೆ ಕೂಡ ಹೊತ್ತಿ ಉರಿದಿದೆ.
ನೆಲಮಂಗಲ ಬಳಿಯ ಅಡಕಮಾರನಹಳ್ಳಿ ಓವರ್ ಟ್ಯಾಂಕ್ ಬಳಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿ, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ನಾಗರಾಜ್(50), ಶ್ರೀನಿವಾಸ್ (50) ಸಾವನ್ನಪ್ಪಿದ್ದಾರೆ.

ಗಂಗಯ್ಯ ಎಂಬುವವರು ಎರಡು ಮನೆಗಳನ್ನು ಬಾಡಿಗೆಗೆ ನೀಡಿದ್ದರು. ಇದರಲ್ಲಿ ಒಂದು ಮನೆಯನ್ನು ನಾಗರಾಜ್ ಬಾಡಿಗೆ ಪಡೆದಿದ್ದರು. ಮೂಲತಃ ಬಳ್ಳಾರಿಯವರಾಗಿದ್ದ ನಾಗರಾಜ್ ಕುಟುಂಬ ಎರಡು ವರ್ಷಗಳಿಂದ ಬಾಡಿಗೆ ಮನೆಯಲ್ಲಿದ್ದರು.
ನಾಗರಾಜ್ ಪತ್ನಿ ಲಕ್ಷ್ಮಿ ದೇವಿ(35), ಮಕ್ಕಳು ಬಸನಗೌಡ(19) ಅಭಿಷೇಕ್ ಗೌಡ(18) ಈ ಮನೆಯಲ್ಲಿ ವಾಸಿಸುತ್ತಿದ್ದರು. ಇಂದು ಬೆಳಗ್ಗೆ ನಾಗರಾಜ್ ದೇವರಿಗೆ ದೀಪ ಹಚ್ಚಿದ್ದಾರೆ. ಈ ವೇಳೆ ಎರಡನೇ ಮಗ ಅಭಿಷೇಕ್ ಗ್ಯಾಸ್ ಖಾಲಿಯಾಗಿದ್ದರಿಂದಾಗಿ ಸಿಲಿಂಡರ್ ಬದಲಾಯಿಸಲು ಮುಂದಾಗಿದ್ದಾನೆ. ಈ ವೇಳೆ ಗ್ಯಾಸ್ ಲೀಕ್ ಆಗಿ ದೀಪದ ಬೆಂಕಿಯಿಂದ ಬೆಂಕಿ ಹೊತ್ತಿಕೊಂಡಿದೆ. ಕೂಡಲೇ ಮನೆ ತುಂಬ ಬೆಂಕಿ ಆವರಿಸಿದೆ. ಹೀಗಾಗಿ ಮನೆಯಲ್ಲಿ ನಾಗರಾಜ್, ಲಕ್ಷ್ಮಿದೇವಿ, ಬಸವನಗೌಡ, ಅಭಿಷೇಕ್ ಬೆಂಕಿಯಲ್ಲಿ ಸಿಲುಕಿದ್ದಾರೆ.
ಸ್ಥಳೀಯರು ಕೂಡಲೇ ಗಾಯಾಳುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ನಾಗರಾಜ್ ಮತ್ತು ಶ್ರೀನಿವಾಸ್ ಸಾವನ್ನಪ್ಪಿದ್ದಾರೆ. ಅಭಿಷೇಕ್, ಶಿವಶಂಕರ್, ಲಕ್ಷ್ಮೀದೇವಿ ಹಾಗೂ ಬಸವ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.