ನವದೆಹಲಿ: 22 ಜನ ಕಾಮುಕರು 19 ವರ್ಷದ ಯುವತಿ ಅಪಹರಿಸಿ ದಿನವಿಡೀ ಅತ್ಯಾಚಾರ ನಡೆಸಿರುವ ಘಟನೆ ನಡೆದಿದೆ.
ಈ ಅಮಾನವೀಯ ಹಾಗೂ ಭಯಾನಕ ಘಟನೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ (Varanasi) ನಡೆದಿದೆ. ಘಟನೆಗೆ ಸಂಬಂಧಿಸಿದಂತೆ 6 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನುಳಿದವರಿಗಾಗಿ ಶೋಧ ಕಾರ್ಯ ನಡೆದಿದೆ ಎಂದು ಪೊಲೀಸ್ ಮೂಲ ತಿಳಿಸಿದೆ.
ಉತ್ತರ ವಾರಣಾಸಿಯ ಲಾಲ್ಪುರ್ ಪ್ರದೇಶದ ನಿವಾಸಿ ಮಾರ್ಚ್ 29ರಂದು ಸ್ನೇಹಿತರನ್ನ ಭೇಟಿಯಾಗಿ ಮರಳಿ ಮನೆಗೆ ಬರುತ್ತಿದ್ದ ವೇಳೆ ಕಾಮುಕರು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಕಾಮುಕರು ಡ್ರಗ್ಸ್ ನೀಡಿ ಅತ್ಯಾಚಾರ ನಡೆಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ದೂರಿನಲ್ಲಿ ತನ್ನ ಮೇಲೆ 22 ಜನ ಅತ್ಯಾಚಾರ ಎಸಗಿದ್ದಾರೆಂದು ಸಂತ್ರಸ್ತೆ ಹೇಳಿಕೊಂಡಿದ್ದಾಳೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ದೂರು ನೀಡಿದ ಅದೇ ದಿನ ರಾತ್ರಿ ಹುಕ್ಕಾ ಬಾರ್, ಹೋಟೆಲ್, ಲಾಡ್ಜ್ ಮತ್ತು ಅತಿಥಿ ಗೃಹ ಸೇರಿದಂತೆ ವಿವಿಧೆಡೆ ದಾಳಿ ನಡೆಸಿ 6 ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರ ಪೈಕಿ ಕೆಲವರು ಅಪ್ರಾಪ್ತರು ಎನ್ನಲಾಗಿದೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.