ನವದೆಹಲಿ: ಗಗನಯಾತ್ರಿ ಸುನೀತಾ ವಿಲಿಯಮ್ಸ್(Sunitha Williams) ಅವರು ಹುಟ್ಟಿದ್ದು, ಬೆಳೆದಿದ್ದು ಅಮೆರಿಕದಲ್ಲೇ ಆದರೂ, ಅವರು ತಮ್ಮ ಭಾರತದ ಬೇರುಗಳನ್ನು ಎಂದೂ ಮರೆತಿರಲಿಲ್ಲ. ಬಾಹ್ಯಾಕಾಶದಂತಹ ಮತ್ತೊಂದು ಲೋಕಕ್ಕೆ ಪ್ರತಿ ಬಾರಿ ಪ್ರಯಾಣಿಸುವಾಗಲೂ ಸುನೀತಾ ತಮ್ಮೊಂದಿಗೆ “ಭಾರತದ ಸಂಸ್ಕೃತಿ”ಯನ್ನು ಒಯ್ಯುತ್ತಿದ್ದರು. ಕಳೆದ ವರ್ಷ ಜೂನ್ ನಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದಾಗಲೂ ಅವರ ಈ ಭಾರತ ಪ್ರೀತಿ ಮುಂದುವರಿದಿತ್ತು.
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಭಗವದ್ಗೀತೆಯ ಪ್ರತಿಯನ್ನು ಕೊಂಡೊಯ್ಯುವುದರಿಂದ ಹಿಡಿದು ಕಕ್ಷೆಯಲ್ಲೇ ದೀಪಾವಳಿ ಆಚರಿಸುವವರೆಗೂ ಅವರು ಭಾರತೀಯ ಪರಂಪರೆಯ ಮೇಲೆ ತಮಗಿರುವ ಗೌರವವನ್ನು ಸಾಬೀತುಪಡಿಸಿದ್ದಾರೆ.
ಬಾಹ್ಯಾಕಾಶಕ್ಕೆ ಸಮೋಸಾ:
ಭಾರತದ ಖಾದ್ಯಗಳೆಂದರೆ ಸುನೀತಾಗೆ ಪಂಚಪ್ರಾಣ. ಇದೇ ಕಾರಣಕ್ಕೆ ಕಳೆದ ವರ್ಷ ಸ್ಟಾಲ್ ಲೈನರ್ ನಲ್ಲಿ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸುವಾಗ ಸುನೀತಾ ತಮ್ಮೊಂದಿಗೆ ಸಮೋಸಾವನ್ನು ಒಯ್ದಿದ್ದರು. ಈ ಮೂಲಕ ಭಾರತದ ಪರಂಪರೆಯ ಒಂದು ಭಾಗವೂ ಬಾಹ್ಯಾಕಾಶದತ್ತ ಪ್ರಯಾಣ ಬೆಳೆಸಿತ್ತು. ಬಾಹ್ಯಾಕಾಶವೆಂಬ ವಿಶಾಲ ಜಗತ್ತಿನಲ್ಲಿ ತನ್ನೂರಿನ ನಂಟನ್ನು ಬೆಸೆಯುವ ವಿಶೇಷ ಶಕ್ತಿ ಈ ಸಮೋಸಾಗಿತ್ತು.

ಅಂತರಿಕ್ಷದಲ್ಲಿ ದೀಪದ ಹಬ್ಬ:
ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ದೀಪಾವಳಿ ಹಬ್ಬದ ಆಚರಣೆಯು ಸುನೀತಾಗೆ ಇನ್ನಿಲ್ಲದ ಸಂತೋಷ ಒದಗಿಸಿತ್ತು. ಇತರೆ ಗಗನಯಾತ್ರಿಕರೊಂದಿಗೆ ಸೇರಿ ಬೆಳಕಿನ ಹಬ್ಬವನ್ನು ಆಚರಿಸಿದ್ದ ಅವರು, ಇದೊಂದು ಅರ್ಥಪೂರ್ಣ ದೀಪಾವಳಿ. ಈ ದಿನ ನನಗೆ ನನ್ನ ಅಪ್ಪ ನೆನಪಾಗುತ್ತಿದ್ದಾರೆ ಎಂದು ಹೇಳಿದ್ದರು.
ಭಗವದ್ಗೀತೆಯ ಶಕ್ತಿ:
ಭಗವದ್ಗೀತೆಯ ಪ್ರತಿ ಮತ್ತು ಉಪನಿಷತ್ತುಗಳನ್ನೂ ಸುನೀತಾ ತಮ್ಮೊಂದಿಗೆ ಜೋಪಾನವಾಗಿ ಹೊತ್ತೊಯ್ದಿದ್ದರು. ಈ ಪವಿತ್ರ ಗ್ರಂಥಗಳು ಬಾಹ್ಯಾಕಾಶ ಯೋಜನೆಯ ವೇಳೆ ತಮಗೆ ಶಕ್ತಿ, ಮಾರ್ಗದರ್ಶನ ಮತ್ತು ಅಂತರ್ದೃಷ್ಟಿಯನ್ನು ಒದಗಿಸುತ್ತದೆ ಎಂದು ಅವರು ನುಡಿದಿದ್ದರು. ಇದು ಬಾಹ್ಯಾಕಾಶಕ್ಕೆ ಒಯ್ಯಲೇಬೇಕಾದ ಗ್ರಂಥಗಳು ಎಂದೂ ಹೇಳಿದ್ದರು. ಬಾಹ್ಯಾಕಾಶದ ಏಕಾಂತದಲ್ಲಿ ಈ ಆಧ್ಯಾತ್ಮಿಕ ಶಕ್ತಿಯು ಅವರ ಅನಿಶ್ಚಿತತೆಯನ್ನು ದೂರ ಮಾಡಿ, ಗುರಿಯತ್ತ ಗಮನ ನೆಡುವಂತೆ ಮಾಡಿತು.
ವಿಘ್ನ ವಿನಾಶಕನೂ ಜತೆಗಿದ್ದ:
ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ತೆರಲುವ ವೇಳೆ ಗಣೇಶನ ಪುಟ್ಟ ವಿಗ್ರಹವನ್ನೂ ಸುನೀತಾ ಒಯ್ದಿದ್ದರು. “ಅವನೂ ನನ್ನ ಜೊತೆ ಬಾಹ್ಯಾಕಾಶಕ್ಕೆ ಬರುತ್ತಿದ್ದಾನೆ” ಎಂದು ಅವರು ಹಾಸ್ಯಭರಿತರಾಗಿ ನುಡಿದಿದ್ದರು. ವಿಘ್ನ ವಿನಾಶಕನೂ ಆಗಿರುವ ಗಣೇಶ ನನಗೆ ಸದಾ ಮಾರ್ಗದರ್ಶನ ನೀಡುವ ಶಕ್ತಿ. ಗಣೇಶನ ವಿಗ್ರಹ ಸದಾ ನನ್ನ ಜೊತೆಗಿರುತ್ತದೆ ಎಂದು ಅವರು ಹೇಳಿದ್ದರು.