ನವದೆಹಲಿ : ಗೇಮಿಂಗ್ ಕ್ಷೇತ್ರವನ್ನು ಕೇವಲ ಮನರಂಜನೆಯಾಗಿ ನೋಡದೆ, ಅದನ್ನೊಂದು ವೃತ್ತಿಪರ ಕೌಶಲವನ್ನಾಗಿ ರೂಪಿಸಿಕೊಳ್ಳಿ.
ಇದು ‘ಪರೀಕ್ಷಾ ಪೇ ಚರ್ಚಾ 2026’ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಸಲಹೆ. ಶುಕ್ರವಾರ ದೇಶದ ಮೂಲೆ ಮೂಲೆಗಳ ವಿದ್ಯಾರ್ಥಿಗಳೊಂದಿಗೆ ಪ್ರಸಕ್ತ ವರ್ಷದ ಪರೀಕ್ಷಾ ಪೇ ಚರ್ಚಾ ನಡೆಸಿದ ಪ್ರಧಾನಿ ಮೋದಿ, ಅಧ್ಯಯನ ಮತ್ತು ವೈಯಕ್ತಿಕ ಆಸಕ್ತಿಗಳ ನಡುವೆ ಸಮತೋಲನ ಕಾಯ್ದುಕೊಳ್ಳುವ ಬಗ್ಗೆ ಮಾತನಾಡಿದ್ದು, ತಂತ್ರಜ್ಞಾನವನ್ನು ಜವಾಬ್ದಾರಿಯುತವಾಗಿ ಬಳಸುವ ಅಗತ್ಯವನ್ನು ಒತ್ತಿಹೇಳಿದ್ದಾರೆ.
ಗೇಮಿಂಗ್‌ನಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಎದುರಿಸುವ ಸಾಮಾನ್ಯ ಸವಾಲುಗಳ ಬಗ್ಗೆ ಮಾತನಾಡಿದ ಅವರು, ಆರಂಭದಲ್ಲಿ ಪೋಷಕರು ಗೇಮಿಂಗ್ ವಿಷಯದಲ್ಲಿ ಮಕ್ಕಳನ್ನು ವಿರೋಧಿಸುವುದು ಸಹಜ. ಆದರೆ, ಯಾವಾಗ ವಿದ್ಯಾರ್ಥಿಯು ಆ ಕ್ಷೇತ್ರದಲ್ಲಿ ಸಾಧನೆ ಮಾಡಿ ಪದಕ ಅಥವಾ ಮಾನ್ಯತೆ ಪಡೆಯುತ್ತಾನೋ, ಆಗ ಪೋಷಕರ ಟೀಕೆಗಳು ಹೆಮ್ಮೆಯಾಗಿ ಬದಲಾಗುತ್ತವೆ. ಮಕ್ಕಳ ಯಶಸ್ಸು ಪೋಷಕರಿಗೆ ಸಮಾಜದಲ್ಲಿ ಗೌರವ ತಂದುಕೊಡುತ್ತದೆ, ಆನಂತರ ಕುಟುಂಬವೇ ಅಂತಹ ಹವ್ಯಾಸಗಳಿಗೆ ಬೆಂಬಲ ನೀಡಲು ಮುಂದಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಭಾರತೀಯ ಸಂಸ್ಕೃತಿಯ ಗೇಮಿಂಗ್ ಸೃಜನಶೀಲತೆ
ಕೇವಲ ಗೇಮ್‌ಗಳನ್ನು ಆಡುವುದಕ್ಕೆ ಸೀಮಿತವಾಗಬೇಡಿ, ಬದಲಾಗಿ ಗೇಮ್ ಕ್ರಿಯೇಟರ್‌ಗಳಾಗಿ (ಸೃಷ್ಟಿಕರ್ತರು) ಬೆಳೆಯಿರಿ ಎಂದು ಮೋದಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಪಂಚತಂತ್ರದ ಕಥೆಗಳು, ಭಗವಾನ್ ಹನುಮಂತನ ಸಾಹಸಗಳು ಅಥವಾ ಮಹಾಭಾರತದ ಅಭಿಮನ್ಯುವಿನ ಚಕ್ರವ್ಯೂಹ ಭೇದಿಸುವಂತಹ ಭಾರತೀಯ ಸಾಂಸ್ಕೃತಿಕ ಕಥೆಗಳನ್ನು ಆಧರಿಸಿ ಹೊಸ ಗೇಮ್‌ಗಳನ್ನು ಸಿದ್ಧಪಡಿಸುವಂತೆಯೂ ಅವರು ಸೂಚಿಸಿದ್ದಾರೆ. ಇಂತಹ ಸೃಜನಶೀಲ ಪ್ರಯತ್ನಗಳು ಕೇವಲ ವೈಯಕ್ತಿಕ ಬೆಳವಣಿಗೆಯಲ್ಲದೆ, ಸಾಮಾಜಿಕವಾಗಿಯೂ ಮನ್ನಣೆ ತಂದುಕೊಡುತ್ತವೆ ಎಂದು ಅವರು ಹೇಳಿದ್ದಾರೆ.
ಗೇಮಿಂಗ್ ಮತ್ತು ಜೂಜಿನ ನಡುವಿನ ವ್ಯತ್ಯಾಸ
ಇದೇ ವೇಳೆ ಆನ್‌ಲೈನ್ ಗೇಮಿಂಗ್ ಹೆಸರಿನಲ್ಲಿ ನಡೆಯುವ ಜೂಜಿನ ಬಗ್ಗೆ ಮಕ್ಕಳಿಗೆ ಪ್ರಧಾನಿ ಎಚ್ಚರಿಕೆಯನ್ನೂ ನೀಡಿದ್ದಾರೆ. ಹಣ ಹೂಡಿ ಆಡುವ ಜೂಜಾಟವು ವಿನಾಶಕಾರಿ ಎಂದು ಬಣ್ಣಿಸಿದ ಅವರು, ಇಂತಹ ಚಟಗಳಿಂದ ದೂರವಿರಲು ವಿದ್ಯಾರ್ಥಿಗಳಿಗೆ ಸೂಚಿಸಿದ್ದಾರೆ. ಗೇಮಿಂಗ್ ಎನ್ನುವುದು ಏಕಾಗ್ರತೆ, ವೇಗ ಮತ್ತು ಜಾಗರೂಕತೆಯನ್ನು ಬೇಡುವ ಒಂದು ಕೌಶಲ ಆಧಾರಿತ ಚಟುವಟಿಕೆಯಾಗಬೇಕು. ಗುಣಮಟ್ಟದ ಆಟಗಳನ್ನು ಆಯ್ಕೆ ಮಾಡಿಕೊಳ್ಳುವುದು ಮತ್ತು ಅದರಲ್ಲಿ ಪರಿಣತಿ ಪಡೆಯುವುದು ಮುಖ್ಯ ಎಂದು ಅವರು ಕಿವಿಮಾತು ಹೇಳಿದರು.
ಕೌಶಲ ವೃದ್ಧಿಗೆ ಪ್ರಧಾನಿ ಮಂತ್ರ
ತಮ್ಮ ಹವ್ಯಾಸಗಳನ್ನು ಉಪಯುಕ್ತ ಉತ್ಪನ್ನಗಳನ್ನಾಗಿ ಪರಿವರ್ತಿಸಿ ಮತ್ತು ಅವುಗಳನ್ನು ಇತರರೊಂದಿಗೆ ಹಂಚಿಕೊಳ್ಳಿ. ಜನರ ಪ್ರತಿಕ್ರಿಯೆಗಳು ಹೊಸ ಆಲೋಚನೆಗಳಿಗೆ ಇಂಧನವಾಗುತ್ತವೆ ಎಂದು ಪ್ರಧಾನಿ ಹೇಳಿದ್ದಾರೆ. ಭಾರತದಲ್ಲಿ ಡೇಟಾ ಮತ್ತು ತಂತ್ರಜ್ಞಾನ ಅಗ್ಗವಾಗಿ ದೊರೆಯುತ್ತಿರುವುದರಿಂದ, ಅದನ್ನು ಕೇವಲ ಸಮಯ ಕಳೆಯಲು ಬಳಸದೆ ಉತ್ಪಾದಕ ಕೆಲಸಗಳಿಗೆ ಬಳಸಿಕೊಳ್ಳಬೇಕು ಎಂದೂ ಅವರು ಕಿವಿಮಾತು ಹೇಳಿದ್ದಾರೆ.
ಇದನ್ನೂ ಓದಿ : ನಾ ಕೊಡೆ ನೀ ಬಿಡೆ ಹಗ್ಗಜಗ್ಗಾಟ ನಡೆತಿದೆ.. ಇದಕ್ಕೆಲ್ಲ ಹೈಕಮಾಂಡ್ ಕಾರಣ | ಛಲವಾದಿ



















