ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ (92) (Manmohan Singh) ಗುರುವಾರ ರಾತ್ರಿ ನಿಧನರಾಗಿದ್ದು, ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವದೊಂದಿಗೆ ಶನಿವಾರ ನಡೆಯಲಿದೆ ಎಂದು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಅಧಿಕೃತ ಮಾಹಿತಿ ನೀಡಿರುವ ಅವರು, ಮನಮೋಹನ್ ಸಿಂಗ್ ನಿಧನರಾದ ಹಿನ್ನೆಲೆಯಲ್ಲಿ ಡಿ. 28ರಂದು ನಡೆಯಲಿದ್ದ ಕಾಂಗ್ರೆಸ್ ಸಂಸ್ಥಾಪನಾ ದಿನ ಸೇರಿದಂತೆ ಏಳು ದಿನಗಳ ಕಾಲ ಕಾಂಗ್ರೆಸ್‌ನ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ ಎಂದಿದ್ದಾರೆ.
ಮಾಜಿ ಪ್ರಧಾನಿ ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇಂದು ಅವಕಾಶ ನೀಡಲಾಗಿದೆ. ಈಗಾಗಲೇ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮತ್ತು ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ, ಕಾಂಗ್ರೆಸ್‌ನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ಗಣ್ಯರು ಡಾ ಸಿಂಗ್ ಅವರ ನಿವಾಸಕ್ಕೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದ್ದಾರೆ.


















