ಕಲಬುರಗಿ : ಕಲಬುರಗಿ ಬಳಿಯ ಜೆವರ್ಗಿ ಪಟ್ಟಣದ ಹೊರವಲಯದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ರಾಜ್ಯ ಕಂಡ ಜನಸ್ನೇಹಿ ಹಾಗೂ ದಕ್ಷ ಅಧಿಕಾರಿ ಐಎಎಸ್ ಮಹಾಂತೇಶ್ ಬೀಳಗಿ ಅವರು ಮಂಗಳವಾರ ನಿಧನರಾಗಿದ್ದಾರೆ.
ವಿಜಯಪುರ ಮಾರ್ಗವಾಗಿ ಬರುತ್ತಿದ್ದ ಅವರ ಇನ್ನೋವಾ ಕಾರು, ಬೈಕ್ ಒಂದನ್ನು ತಪ್ಪಿಸಲು ಹೋಗಿ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ತಡೆಗೋಡೆಗೆ ಡಿಕ್ಕಿ ಹೊಡೆದು ಸುಮಾರು ನೂರು ಮೀಟರ್‌ಗಳಷ್ಟು ದೂರ ಎಳೆದುಕೊಂಡು ಹೋಗಿದೆ.
ಅಪಘಾತದ ತೀವ್ರತೆಗೆ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದ್ದು, ಏರ್‌ಬ್ಯಾಗ್‌ಗಳು ತೆರೆದುಕೊಂಡಿದ್ದರೂ ಕಾರಿನಲ್ಲಿದ್ದವರು ಸಾವನ್ನಪ್ಪಿದ್ದಾರೆ. ಕಾರಿನಲ್ಲಿ ಐದು ಜನ ಪ್ರಯಾಣಿಸುತ್ತಿದ್ದು, ಐವರಲ್ಲಿ ನಾಲ್ವರು ದುರ್ಮರಣಕ್ಕೀಡಾಗಿದ್ದಾರೆ.
ಮಹಾಂತೇಶ್ ಬೀಳಗಿ ಅವರ ಸ್ನೇಹಿತ ಇರಣ್ಣ ಸಿರಸಂಗಿ ಅವರೂ ಸಹ ಸಾವನ್ನಪ್ಪಿರುವುದು ದೃಢಪಟ್ಟಿದೆ. ಅಪಘಾತದ ಸ್ಥಳದಲ್ಲಿ ಮರ ಕಿತ್ತು ಬಂದಿರುವುದು ಕಾರಿನ ವೇಗ ಮತ್ತು ಡಿಕ್ಕಿಯ ಭೀಕರತೆಗೆ ಸಾಕ್ಷಿಯಾಗಿದೆ.
ಐಎಎಸ್ ಅಧಿಕಾರಿ , ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ ಸರಳ ಹಾಗೂ ಸಜ್ಜನಿಕೆಯ ಅಧಿಕಾರಿ ಮಹಾಂತೇಶ್ ಬೀಳಗಿ ಸಾವು ರಾಜ್ಯವನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ. ಇಂದು ರಾಮದುರ್ಗದ ತೋಟದಲ್ಲೇ ತಾಯಿ ಸಮಾಧಿ ಪಕ್ಕದಲ್ಲಿ ಮಹಾಂತೇಶ್ ಬೀಳಗಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಬೀಳಗಿ ಮನೆಯಲ್ಲಿ ನೀರವ ಮೌನ :
ಕಡುಬಡತನದಿಂದಲೇ ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿ ದಕ್ಷ ಐಎಎಸ್ ಅಧಿಕಾರಿಯಾಗಿದ್ದ ಮಹಾಂತೇಶ್ ಬೀಳಗಿ ಇಡೀ ರಾಜ್ಯದ ಬಡ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದರು. ಸದ್ಯ ಮಹಾಂತೇಶ್ ಬೀಳಗಿ ಹುಟ್ಟೂರಿನಲ್ಲಿ ನೀರವ ಮೌನ ಆವರಿಸಿದೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ನವಿಪೇಟನಲ್ಲಿರುವ ಮಹಾಂತೇಶ್ ನಿವಾಸದಲ್ಲಿ ಸಂಬಂಧಿಕರು, ಜನರು ಜಮಾವಣೆಗೊಂಡಿದ್ದಾರೆ. ಸಾವಿನ ಸುದ್ದಿ ಕೇಳಿ ಮಹಾಂತೇಶ್ ಬೀಳಗಿಗೆ ಕಲಿಸಿದ ಗುರುಗಳು, ಸ್ನೇಹಿತರು ಮನೆಗೆ ಆಗಮಿಸಿ ಬೀಳಗಿ ನೆನೆದು ಭಾವುಕರಾದರು. ಆಸ್ಪತ್ರೆಗೆ ಕಲಬುರಗಿ ಜಿಲ್ಲೆಯ ಹಿರಿಯ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳು ಭೇಟಿ ನೀಡಿ ಅಂತಿಮ ದರ್ಶನ ಪಡೆದಿದ್ದಾರೆ.
ಮೂಲತಃ ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ನಿವಾಸಿಯಾದ ಮಹಾಂತೇಶ್ ಬೀಳಗಿ 1974ರ ಮಾರ್ಚ್ 27ರಂದು ಜನಿಸಿದರು. ಕಡು ಬಡತನದಲ್ಲಿ ಶಿಕ್ಷಣ ಪಡೆದು ಉನ್ನತ ಹುದ್ದೆಗೇರಿದ್ದ ಬೀಳಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ರಾಮದುರ್ಗದಲ್ಲಿ ಪಡೆದು ವಿದ್ಯಾರ್ಥಿ ಜೀವನದಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದರು. ಬೀಳಗಿ ಅವರ ತಾಯಿ ರೊಟ್ಟಿ ವ್ಯಾಪಾರ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಕಷ್ಟದ ಜೀವನದಲ್ಲಿ ಛಲ ಬಿಡದೇ ಓದಿ ಕೆಎಎಸ್ ಪಾಸ್ ಮಾಡಿದ್ದ ಮಹಾಂತೇಶ್ ಬೀಳಗಿ 2012ರ ಕರ್ನಾಟಕ ಕೇಡರ್‌ನ ಐಎಎಸ್ ಅಧಿಕಾರಿಯಾಗಿ ಆಯ್ಕೆಯಾಗಿದ್ದರು. ಪ್ರಸ್ತುತ ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಬೆಸ್ಕಾಂ ಎಂಡಿ, ದಾವಣಗೆರೆ ಡಿಸಿ, ಉಡುಪಿ ಸೇರಿದಂತೆ ಕರ್ನಾಟಕದ ಬೇರೆ ಬೇರೆ ಕಡೆ ಕಾರ್ಯನಿರ್ವಹಿಸಿದ್ದರು. ಧಾರವಾಡದಲ್ಲಿರುವ ಸ್ಪರ್ಧಾ ವಿದ್ಯಾರ್ಥಿಗಳಿಗೆ ಕೋಚಿಂಗ್ ನೀಡುತ್ತಿದ್ದರು. ಬಳಿಕ ಕೆಎಎಸ್ ಪರೀಕ್ಷೆ ಬರೆದು ಪಾಸ್ ಮಾಡಿ ನೇರವಾಗಿ ಎಸಿಯಾಗಿ ಆಯ್ಕೆ ಆಗಿದ್ದರು.
ಇದನ್ನೂ ಓದಿ : ಇವಿ ಬಸ್ ಚಲಿಸುವಾಗ ಮೊಬೈಲ್ ಬಳಸುವುದು ನಿಷೇಧ | ಬಿಎಂಟಿಸಿ ಆದೇಶ



















