ಶಾರ್ಜಾ: ಭಾರತ ಕ್ರಿಕೆಟ್ ತಂಡದ ಅನುಭವಿ ಆಟಗಾರ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಮಾಜಿ ಆಟಗಾರ ದಿನೇಶ್ ಕಾರ್ತಿಕ್, ಇದೀಗ ಹೊಸ ಇನ್ನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ. ಮುಂಬರುವ ಇಂಟರ್‌ನ್ಯಾಶನಲ್ ಲೀಗ್ ಟಿ20 (ಐಎಲ್‌ಟಿ20) ಯ ನಾಲ್ಕನೇ ಆವೃತ್ತಿಗಾಗಿ ಅವರು ಶಾರ್ಜಾ ವಾರಿಯರ್ಸ್ ತಂಡವನ್ನು ಸೇರಿಕೊಂಡಿದ್ದಾರೆ.
ಶ್ರೀಲಂಕಾದ ವಿಕೆಟ್ ಕೀಪರ್-ಬ್ಯಾಟರ್ ಕುಸಾಲ್ ಮೆಂಡಿಸ್ ಅವರ ಬದಲಿಗೆ ದಿನೇಶ್ ಕಾರ್ತಿಕ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. 2024ರಲ್ಲಿ ಭಾರತೀಯ ಕ್ರಿಕೆಟ್‌ನ ಎಲ್ಲಾ ಮಾದರಿಗಳಿಗೆ ನಿವೃತ್ತಿ ಘೋಷಿಸಿದ ನಂತರ, ಕಾರ್ತಿಕ್ ಅವರು ಐಪಿಎಲ್ 2025ರಲ್ಲಿ ಚಾಂಪಿಯನ್ ಆದ ಆರ್‌ಸಿಬಿ ತಂಡದ ಬ್ಯಾಟಿಂಗ್ ಕೋಚ್ ಆಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದರು. ಇದೀಗ ಮತ್ತೆ ಆಟಗಾರನಾಗಿ ಕಣಕ್ಕಿಳಿಯುತ್ತಿದ್ದಾರೆ
ಕನಸು ನನಸಾದ ಕ್ಷಣ’ ಎಂದ ಕಾರ್ತಿಕ್
ಶಾರ್ಜಾ ವಾರಿಯರ್ಸ್ ತಂಡವನ್ನು ಸೇರಿಕೊಂಡಿರುವ ಬಗ್ಗೆ ಸಂತಸ ವ್ಯಕ್ತಪಡಿಸಿರುವ ದಿನೇಶ್ ಕಾರ್ತಿಕ್, “ನಾನು ಶಾರ್ಜಾ ವಾರಿಯರ್ಸ್ ತಂಡವನ್ನು ಸೇರಲು ತುಂಬಾ ಉತ್ಸುಕನಾಗಿದ್ದೇನೆ. ಇದು ಯುವ ಆಟಗಾರರಿಂದ ಕೂಡಿದ, ವಿಶೇಷ ಸಾಧನೆ ಮಾಡಲು ಬಯಸುವ ತಂಡ ಎಂದು ನನಗೆ ತಿಳಿದಿದೆ. ಅವರೊಂದಿಗೆ ಇರುವುದಕ್ಕೆ ನನಗೆ ಸಂತೋಷವಿದೆ,” ಎಂದು ಹೇಳಿದ್ದಾರೆ.
ಇದಲ್ಲದೆ, “ಶಾರ್ಜಾ ಕ್ರಿಕೆಟ್ ಜಗತ್ತಿನ ಒಂದು ಐಕಾನಿಕ್ ಕ್ರೀಡಾಂಗಣ. ಅಲ್ಲಿ ಆಡುವುದು ಪ್ರತಿಯೊಬ್ಬ ಕ್ರಿಕೆಟಿಗನ ಕನಸಾಗಿರುತ್ತದೆ. ಶಾರ್ಜಾ ವಾರಿಯರ್ಸ್ ಫ್ರಾಂಚೈಸಿಯ ಭಾಗವಾಗುವ ಮೂಲಕ ನನ್ನ ಕನಸು ನನಸಾಗಿದೆ,” ಎಂದು ಕಾರ್ತಿಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಂಡಕ್ಕೆ ಕಾರ್ತಿಕ್ ಸೇರ್ಪಡೆಯಿಂದ ಹರ್ಷ
ಶಾರ್ಜಾ ವಾರಿಯರ್ಸ್ ತಂಡದ ಮುಖ್ಯ ಕೋಚ್, ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಜೆ.ಪಿ. ಡುಮಿನಿ ಅವರು ಕಾರ್ತಿಕ್ ಸೇರ್ಪಡೆಯನ್ನು ಸ್ವಾಗತಿಸಿದ್ದಾರೆ. “ದಿನೇಶ್ ಕಾರ್ತಿಕ್ ಟಿ20 ಕ್ರಿಕೆಟ್‌ನಲ್ಲಿ ಅಪಾರ ಅನುಭವ ಮತ್ತು ನವೀನ ಆಲೋಚನೆಗಳನ್ನು ಹೊಂದಿರುವ ಆಟಗಾರ. ಅವರ ಸ್ಫೋಟಕ ಬ್ಯಾಟಿಂಗ್, ಕ್ರಿಯಾಶೀಲ ವ್ಯಕ್ತಿತ್ವ ಮತ್ತು ಅನುಭವವು ತಂಡದ ಯುವ ಆಟಗಾರರಿಗೆ ಖಂಡಿತವಾಗಿಯೂ ಪ್ರಯೋಜನ ನೀಡಲಿದೆ,” ಎಂದು ಡುಮಿನಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶಾರ್ಜಾ ವಾರಿಯರ್ಸ್ ತಂಡದಲ್ಲಿ ಆರ್‌ಸಿಬಿ ತಂಡದಲ್ಲಿ ಕಾರ್ತಿಕ್ ಅವರ ಸಹ ಆಟಗಾರನಾಗಿದ್ದ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟರ್ ಟಿಮ್ ಡೇವಿಡ್ ಕೂಡ ಇದ್ದಾರೆ. ಹೀಗಾಗಿ, ಈ ಇಬ್ಬರು ಆಟಗಾರರು ಮತ್ತೆ ಒಂದೇ ತಂಡದಲ್ಲಿ ಆಡಲಿದ್ದಾರೆ.