ಬೆಂಗಳೂರು: ಮದುವೆ ಕೆಲಸಕ್ಕೆ ಬಂದವವರಿಗೆ ವಂಚಿಸಿರುವ ಘಟನೆ ನಡೆದಿದೆ.
ಕೆಲಸ ಕೊಡಿಸುತ್ತೇನೆ ಅಂತ ಹೇಳಿ ಕೆಲಸಕ್ಕೆಂದು ಕರೆಯಿಸಿ ಕಾಂಟ್ರಾಕ್ಟರ್ ಒಬ್ಬರು ಮೋಸ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿದೆ. ಕೆಲಸಕ್ಕೆ ಬಂದವರು ರಾತ್ರಿ ವೇಳೆ ನಡು ರಸ್ತೆಯಲ್ಲೇ ನಿಲ್ಲುವಂತಹ ಪರಿಸ್ಥಿತಿ ಎದುರಾಗಿತ್ತು.
ಪ್ರಭಾವಿ ಕುಟುಂಬದ ಮದುವೆಯಲ್ಲಿ ಕಾರ್ಮಿಕರಿಗೆ ವಂಚನೆ ಆಗಿದೆ ಎನ್ನಲಾಗಿದೆ. ಶನಿವಾರ, ಭಾನುವಾರ ಅರಮನೆ ಮೈದಾನದಲ್ಲಿ ಮದುವೆ ನಡೆದಿದೆ. ಮದುವೆಯಲ್ಲಿ ತರಕಾರಿ ಕಟ್ ಮಾಡಲು, ಪಾತ್ರೆ ತೊಳೆಯಲು, ಕ್ಲೀನ್ ಮಾಡಲು ಹಲವರು ಆಗಮಿಸಿದ್ದರು. ಆದರೆ, ಆನಂತರ ಮೋಸ ಮಾಡಿದ್ದಾರೆಂದು ಸುಗುಣ ಎನ್ನುವ ಮಹಿಳೆ ವಿರುದ್ಧ ಸದಾಶಿವ ನಗರ ಪೊಲೀಸ್ ಠಾಣೆಯಲ್ಲಿ ಕಾರ್ಮಿಕರು ದೂರು ಸಲ್ಲಿಸಿದ್ದಾರೆ.
ತಿರಪತ್ತೂರಿನಿಂದ ಮದುವೆ ಕೆಲಸಕ್ಕೆಂದು ಸುಮಾರು 60 ಜನ ಬಂದಿದ್ದರು. ಒಬ್ಬರಿಗೆ ಒಂದು ದಿನಕ್ಕೆ 1250 ರೂ. ಸಂಬಳ ನೀಡುವುದಾಗಿ ಕರೆಯಿಸಲಾಗಿತ್ತು. ಆದರೆ, ಕೆಲಸ ಮುಗಿದ ಮೇಲೆ 700 ರೂ. ಕೊಡುತ್ತೇವೆಂದು ಮೋಸ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಹೀಗಾಗಿ ಕೆಲಸಕ್ಕೆ ಬಂದವರು ಸುಗುಣ ನಮಗೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ. ಅಲ್ಲದೇ, ರಸ್ತೆ ಬದಿಯಲ್ಲೇ ತಂಗಿ, ನಮಗೆ ಹೇಳಿದಷ್ಟು ದುಡ್ಡು ಕೊಡಿ ಎಂದು ಪಟ್ಟು ಹಿಡಿದಿದ್ದಾರೆ. ಈ ಕುರಿತು ಸದಾಶಿವ ನಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.