ಟ್ರಿನಿಡಾಡ್: ಟಿ20 ಕ್ರಿಕೆಟ್ (T20) ಅಂಗಳದಲ್ಲಿ ಒಂದು ಓವರ್ ಮೇಡನ್ ಮಾಡುವುದಕ್ಕಾಗಿಯೇ ಬೌಲರ್ ಗಳು ಹೆಣಗಾಡುತ್ತಿರುತ್ತಾರೆ. ಆದರೆ, ನ್ಯೂಜಿಲೆಂಡ್ (New Zealand) ನ ಬೌಲರ್ ಎಲ್ಲಾ 4 ಓವರ್ ಮೇಡನ್ ಮಾಡಿ 3 ವಿಕೆಟ್ ಕಿತ್ತು ಅಪರೂಪದ ಹಾಗೂ ಕಠಿಣ ದಾಖಲೆಯೊಂದನ್ನು ಲಾಕಿ ಫರ್ಗ್ಯೂಸನ್ (Lockie Ferguson) ಬರೆದಿದ್ದಾರೆ.
ಪಾಪುವಾ ನ್ಯೂಗಿನಿ (Papua New Guinea) ವಿರುದ್ಧ ನಡೆದ ಪಂದ್ಯದಲ್ಲಿ ಫರ್ಗ್ಯೂಸನ್ ಈ ವಿಶಿಷ್ಟ ದಾಖಲೆ ಬರೆದಿದ್ದಾರೆ. ನಾಲ್ಕೂ ಓವರ್ ಗಳನ್ನು ಎಸೆದಿರುವ ಅವರು ಯಾವುದೇ ರನ್ ನೀಡದೆ, 3 ವಿಕೆಟ್ ಪಡೆದಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಟಿ 20 ಕ್ರಿಕೆಟ್ ನಲ್ಲಿ ಎಲ್ಲಾ ನಾಲ್ಕು ಓವರ್ ಗಳಲ್ಲಿ ಮೇಡನ್ ಸಾಧನೆ ಮಾಡಿದ ಎರಡನೇ ಬೌಲರ್ ಎನಿಸಿಕೊಂಡಿದ್ದಾರೆ.
ಈ ಹಿಂದೆ 2021ರ ಟಿ20 ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಕೆನಡಾದ ಸಾದ್ ಬಿನ್ ಜಾಫರ್ ಎಂಬ ಬೌಲರ್ ಪನಮಾ ವಿರುದ್ಧ ನಾಲ್ಕು ಓವರ್‌ಗಳಲ್ಲಿ ಮೇಡನ್ ಸಾಧನೆ ಮಾಡಿ 2 ವಿಕೆಟ್ ಪಡೆದು ದಾಖಲೆ ಬರೆದಿದ್ದರು.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಪುವಾ ನ್ಯೂಗಿನಿ 78 ರನ್‌ಗಳಿಗೆ ಆಲೌಟ್ ಆಯ್ತು. ಸುಲಭದ ಸವಾಲನ್ನು ಬೆನ್ನಟ್ಟಿದ ನ್ಯೂಜಿಲೆಂಡ್ 12.3 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 79 ರನ್ ಗಳಿಸಿ ಜಯ ಸಾಧಿಸಿದರು. ಈ ಮೂಲಕ ಟಿ20 ಅಭಿಯಾನವನ್ನೂ ನ್ಯೂಜಿಲೆಂಡ್ ತಂಡ ಮುಗಿಸಿತು.
ಸಿ ಗುಂಪಿನಲ್ಲಿದ್ದ ನ್ಯೂಜಿಲೆಂಡ್ ತಂಡ ನಾಲ್ಕು ಪಂದ್ಯಗಳಲ್ಲಿ 2 ಪಂದ್ಯಗಳಲ್ಲಿ ಮಾತ್ರ ಗೆದ್ದು ಟೂರ್ನಿಯಿಂದ ಹೊರ ನಡೆದಿದೆ.
