ನವದೆಹಲಿ: ಭಾರತೀಯ ಆಟೊಮೊಬೈಲ್ ಮಾರುಕಟ್ಟೆಯಲ್ಲಿ ಎಸ್‌ಯುವಿಗಳಿಗೆ (SUV) ಇರುವ ಬೇಡಿಕೆ ದಿನೇ ದಿನೇ ಹೆಚ್ಚುತ್ತಿದೆ. ಗ್ರಾಹಕರ ಈ ಉತ್ಸಾಹವನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಎರಡು ವಾರಗಳಲ್ಲಿ ಮಾರುತಿ ಸುಜುಕಿ, ಟಾಟಾ ಮೋಟಾರ್ಸ್ ಮತ್ತು ಕಿಯಾ ಇಂಡಿಯಾ ತಮ್ಮ ಬಹುನಿರೀಕ್ಷಿತ ಹೊಸ ಮಾದರಿಗಳನ್ನು ಬಿಡುಗಡೆ ಮಾಡಲು ಸಜ್ಜಾಗಿವೆ. ಎಲೆಕ್ಟ್ರಿಕ್ ಮತ್ತು ಪೆಟ್ರೋಲ್ ಎಂಜಿನ್ ಮಾದರಿಗಳು ಇದರಲ್ಲಿ ಸೇರಿದ್ದು, ವರ್ಷಾಂತ್ಯದ ಮಾರುಕಟ್ಟೆಯಲ್ಲಿ ಭಾರಿ ಪೈಪೋಟಿ ನಿರೀಕ್ಷಿಸಲಾಗಿದೆ.
ಮಾರುತಿಯ ಚೊಚ್ಚಲ ಎಲೆಕ್ಟ್ರಿಕ್ ‘ಇ-ವಿಟಾರಾ’ ಪ್ರವೇಶ
ಭಾರತದ ಅತಿದೊಡ್ಡ ಕಾರು ತಯಾರಕ ಸಂಸ್ಥೆ ಮಾರುತಿ ಸುಜುಕಿ, ಎಲೆಕ್ಟ್ರಿಕ್ ವಾಹನ ಕ್ಷೇತ್ರಕ್ಕೆ ಅಧಿಕೃತವಾಗಿ ಕಾಲಿಡುತ್ತಿದೆ. ಸಂಸ್ಥೆಯ ಮೊದಲ ಎಲೆಕ್ಟ್ರಿಕ್ ಎಸ್‌ಯುವಿ ‘ಇ-ವಿಟಾರಾ’ ಇದೇ ಡಿಸೆಂಬರ್ 2 ರಂದು ಬಿಡುಗಡೆಯಾಗಲಿದೆ. ಹಿಯರ್‌ಟೆಕ್ಟ್-ಇ ಪ್ಲಾಟ್‌ಫಾರ್ಮ್ ಆಧಾರಿತವಾಗಿರುವ ಈ ಕಾರಿನಲ್ಲಿ 49kWh ಮತ್ತು 61kWh ಎಂಬ ಎರಡು ಬ್ಯಾಟರಿ ಆಯ್ಕೆಗಳಿರಲಿವೆ. ಈ ಬ್ಯಾಟರಿಗಳನ್ನು ಪ್ರಖ್ಯಾತ ಬಿವೈಡಿ (BYD) ಸಂಸ್ಥೆಯಿಂದ ಪಡೆಯಲಾಗಿದೆ.
ಬ್ಯಾಟರಿ ಸಾಮರ್ಥ್ಯಕ್ಕೆ ತಕ್ಕಂತೆ ಮೈಲೇಜ್ ಕೂಡ ಇರಲಿದ್ದು, ಸಣ್ಣ ಬ್ಯಾಟರಿ ಪ್ಯಾಕ್ 344 ಕಿ.ಮೀ ಮತ್ತು ದೊಡ್ಡ ಬ್ಯಾಟರಿ ಪ್ಯಾಕ್ 426 ಕಿ.ಮೀ (WLTP) ವ್ಯಾಪ್ತಿಯನ್ನು ನೀಡಬಲ್ಲದು ಎಂದು ಕಂಪನಿ ಹೇಳಿಕೊಂಡಿದೆ. ಆರಂಭದಲ್ಲಿ ಟೂ ವೀಲ್ ಡ್ರೈವ್ ಮಾದರಿ ಬರಲಿದ್ದು, ನಂತರದ ದಿನಗಳಲ್ಲಿ ಡ್ಯುಯಲ್ ಮೋಟಾರ್ ಇರುವ ಆಲ್ ವೀಲ್ ಡ್ರೈವ್ (AWD) ಮಾದರಿ ಕೂಡ ಮಾರುಕಟ್ಟೆಗೆ ಬರಲಿದೆ. ಪನೋರಾಮಿಕ್ ಗ್ಲಾಸ್ ರೂಫ್, ಲೆವೆಲ್-2 ADAS ಮತ್ತು ವೆಂಟಿಲೇಟೆಡ್ ಸೀಟ್‌ಗಳಂತಹ ಪ್ರೀಮಿಯಂ ಫೀಚರ್‌ಗಳು ಇದರಲ್ಲಿರಲಿವೆ.
ಪೆಟ್ರೋಲ್ ಎಂಜಿನ್ ಬಲದೊಂದಿಗೆ ಹ್ಯಾರಿಯರ್ ಮತ್ತು ಸಫಾರಿ
ಡೀಸೆಲ್ ಎಂಜಿನ್ ಮೂಲಕವೇ ಮಾರುಕಟ್ಟೆಯಲ್ಲಿ ದರ್ಬಾರ್ ನಡೆಸಿದ್ದ ಟಾಟಾ ಹ್ಯಾರಿಯರ್ ಮತ್ತು ಸಫಾರಿ, ಇದೇ ಮೊದಲ ಬಾರಿಗೆ ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೆ ಡಿಸೆಂಬರ್ 9 ರಂದು ಮಾರುಕಟ್ಟೆಗೆ ಲಗ್ಗೆ ಇಡಲಿವೆ. ಟಾಟಾದ ಹೊಸ ‘ಹೈಪರಿಯನ್’ 1.5 ಲೀಟರ್ ಟರ್ಬೊ ಜಿಡಿಐ (TGDi) ಪೆಟ್ರೋಲ್ ಎಂಜಿನ್ ಇವುಗಳಿಗೆ ಶಕ್ತಿ ತುಂಬಲಿದೆ.
ಇತ್ತೀಚೆಗೆ ಬಿಡುಗಡೆಯಾದ ಸಿಯೆರಾ ಕಾರಿನಲ್ಲಿ ಈ ಎಂಜಿನ್ 160hp ಶಕ್ತಿ ಉತ್ಪಾದಿಸುತ್ತದೆ. ಆದರೆ ಹ್ಯಾರಿಯರ್ ಮತ್ತು ಸಫಾರಿಯಲ್ಲಿ ಇದು ಇನ್ನಷ್ಟು ಹೆಚ್ಚಿನ ಶಕ್ತಿ, ಅಂದರೆ ಸುಮಾರು 168hp ಮತ್ತು 280Nm ಟಾರ್ಕ್ ನೀಡುವ ಸಾಧ್ಯತೆಯಿದೆ. ಪೆಟ್ರೋಲ್ ಎಂಜಿನ್ ಸೇರ್ಪಡೆಯಿಂದಾಗಿ ಈ ಕಾರುಗಳ ಆರಂಭಿಕ ಬೆಲೆಯಲ್ಲಿ ಇಳಿಕೆಯಾಗುವ ನಿರೀಕ್ಷೆಯಿದ್ದು, ಇದು ಪ್ರತಿಸ್ಪರ್ಧಿಗಳಿಗೆ ನಡುಕ ಹುಟ್ಟಿಸಲಿದೆ. ಗ್ರಾಹಕರು 6-ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳನ್ನು ಪಡೆಯಬಹುದು.
ಹೊಸ ಅವತಾರದಲ್ಲಿ ಕಿಯಾ ಸೆಲ್ಟೋಸ್
ಭಾರತದಲ್ಲಿ ಕಿಯಾ ಸಂಸ್ಥೆಯ ಭವಿಷ್ಯವನ್ನೇ ಬದಲಿಸಿದ ‘ಸೆಲ್ಟೋಸ್’, ಈಗ ಎರಡನೇ ತಲೆಮಾರಿನ (Second Generation) ಅವತಾರದಲ್ಲಿ ಡಿಸೆಂಬರ್ 10 ರಂದು ಜಾಗತಿಕವಾಗಿ ಅನಾವರಣಗೊಳ್ಳಲಿದೆ. ಹಳೆಯ ಮಾಡೆಲ್‌ಗಿಂತ ಇದು ಗಾತ್ರದಲ್ಲಿ ಹಿರಿದಾಗಿರಲಿದ್ದು, ಎಲ್‌ಇಡಿ ಹೆಡ್‌ಲ್ಯಾಂಪ್, ಗ್ರಿಲ್ ಮತ್ತು ಒಳಾಂಗಣ ವಿನ್ಯಾಸ ಸಂಪೂರ್ಣ ಬದಲಾಗಲಿದೆ ಎಂದು ಟೆಸ್ಟ್ ಡ್ರೈವ್ ವೇಳೆ ಕಂಡುಬಂದಿದೆ.
ಒಳಾಂಗಣದಲ್ಲಿ ಡ್ಯಾಶ್‌ಬೋರ್ಡ್ ವಿನ್ಯಾಸ ಬದಲಾಗಲಿದ್ದು, 12.3 ಇಂಚಿನ ಡ್ಯುಯಲ್ ಸ್ಕ್ರೀನ್ ಸೆಟಪ್, ಸಾಫ್ಟ್ ಟಚ್ ಮೆಟೀರಿಯಲ್ಸ್ ಮತ್ತು ಪ್ರೀಮಿಯಂ ಫೀಚರ್‌ಗಳಿರಲಿವೆ. ಎಂಜಿನ್ ವಿಷಯದಲ್ಲಿ ಸದ್ಯಕ್ಕೆ ಹಳೆಯ ಮಾದರಿಯಲ್ಲಿದ್ದ 1.5 ಲೀಟರ್ ಪೆಟ್ರೋಲ್, ಟರ್ಬೊ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳೇ ಮುಂದುವರಿಯಲಿವೆ. ಹೈಬ್ರಿಡ್ ಮಾದರಿಯ ನಿರೀಕ್ಷೆಯಲ್ಲಿದ್ದವರಿಗೆ ಸದ್ಯ ನಿರಾಸೆಯಾಗಲಿದ್ದು, ಅದು ಮುಂದಿನ ವರ್ಷ ಬರುವ ಸಾಧ್ಯತೆಯಿದೆ.
ಇದನ್ನೂ ಓದಿ:ಜೇಬಿಗೆ ಹೊರೆ ತಪ್ಪಿಸಲು ಹೊಸ ವರ್ಷದವರೆಗೆ ಕಾಯಬೇಡಿ : ಬಿವೈಡಿ ‘ಸೀಲಯನ್ 7’ ಬೆಲೆ ಏರಿಕೆಗೆ ದಿನಗಣನೆ



















