ನವದೆಹಲಿ: ನರೇಂದ್ರ ಮೋದಿ ಸಂಪುಟದಲ್ಲಿ ನಾಲ್ವರು ಕನ್ನಡಿಗರಿಗೆ ಅವಕಾಶ ಸಿಕ್ಕಿದ್ದು, ನಾಲ್ವರಿಗೂ ಉತ್ತಮ ಖಾತೆಗಳು ಸಿಕ್ಕಿವೆ.
3ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ನರೇಂದ್ರ ಮೋದಿ ಅವರಿಂದು ತಮ್ಮ ನಿವಾಸದಲ್ಲಿ ಮೊದಲ ಸಂಪುಟ ಸಭೆ ನಡೆಸಿದರು. 30 ಸಂಪುಟ ದರ್ಜೆ ಸಚಿವರು, ಐವರು ಸ್ವತಂತ್ರ ಖಾತೆ ನಿರ್ವಹಣೆ ಹಾಗೂ 31 ರಾಜ್ಯ ಖಾತೆ ಸಚಿವರು ಈ ಸಂದರ್ಭದಲ್ಲಿ ಹಾಜರಿದ್ದರು.
ಸಂಪುಟ ಸಭೆಯ ನಂತರ ಖಾತೆ ಹಂಚಿಕೆ ಪ್ರಕ್ರಿಯೆ ನಡೆದಿದ್ದು, ಪ್ರಮುಖ ಖಾತೆಗಳನ್ನು ಬಿಜೆಪಿ ತನ್ನಲ್ಲೇ ಉಳಿಸಿಕೊಂಡಿದೆ. ಕರ್ನಾಟಕದ ಹೆಚ್.ಡಿ ಕುಮಾರಸ್ವಾಮಿ – ಉಕ್ಕು ಮತ್ತು ಬೃಹತ್ ಕೈಗಾರಿಕೆ, ಪ್ರಹ್ಲಾದ್ ಜೋಶಿ – ಆಹಾರ ಮತ್ತು ನಾಗರೀಕ ಸರಬರಾಜು ಖಾತೆ, ನವೀಕರಿಸಬಹುದಾದ ಇಂಧನ, ಶೋಭಾ ಕರಂದ್ಲಾಜೆ – ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ರಾಜ್ಯ ಖಾತೆ ಮತ್ತು ಕಾರ್ಮಿಕ ಇಲಾಖೆ ರಾಜ್ಯಖಾತೆ, ವಿ. ಸೋಮಣ್ಣ – ಜಲಶಕ್ತಿ ರಾಜ್ಯಖಾತೆ, ರೈಲ್ವೇ ಸಚಿವ ರಾಜ್ಯಖಾತೆಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ನರೇಂದ್ರ ಮೋದಿ ಸಂಪುಟದ ನೂತನ ಸಚಿವರಾಗಿ ಹೆಚ್.ಡಿ ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ, ವಿ.ಸೋಮಣ್ಣ ಹಾಗೂ ಶೋಭಾ ಕರಂದ್ಲಾಜೆ ಪ್ರಮಾಣವಚನ ಸ್ವೀಕರಿಸಿದ್ದರು. ಜೋಶಿ ಹಾಗೂ ಶೋಭಾ ಕರಂದ್ಲಾಜೆ ಅವರು 2ನೇ ಬಾರಿಗೆ ಮೋದಿ ಸಂಪುಟ ಸಚಿವರಾಗಿದ್ದಾರೆ. ಮೊದಲಬಾರಿಗೆ ಸಂಸದರಾಗಿ ಆಯ್ಕೆಯಾದ ವಿ.ಸೋಮಣ್ಣ ಅವರು ಕೂಡ ಕೇಂದ್ರ ಸಚಿವರಾಗಿದ್ದಾರೆ.
ಮೊದಲ ಸಂಪುಟ ಸಭೆಯಲ್ಲಿಯೇ ಬಡವರಿಗೆ ಅನುಕೂಲವಾಗುವ ದಿಸೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಇದಕ್ಕೆ ಎಲ್ಲ ಸಚಿವರು ಸಹಮತ ಸೂಚಿಸಿದರು. ದೇಶದ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಬಡವರಿಗೆ 3 ಕೋಟಿ ಮನೆಗಳನ್ನು ನಿರ್ಮಿಸಿಕೊಡುವ ಮಹತ್ವದ ತೀರ್ಮಾನ ಕೈಗೊಳ್ಳಲಾಯಿತು.


















