ಐಜ್ವಾಲ್: ಮಿಜೋರಾಂ ಕ್ರಿಕೆಟ್ ಲೋಕದಲ್ಲಿ ಭರಿಸಲಾರದ ಶೋಕವೊಂದು ಆವರಿಸಿದೆ. ರಾಜ್ಯದ ಮಾಜಿ ರಣಜಿ ಆಟಗಾರ ಕೆ ಲಾಲ್ರೆಮ್ರುಅಟಾ ಅವರು ಸ್ಥಳೀಯ ಪಂದ್ಯವೊಂದರ ವೇಳೆ ಮೈದಾನದಲ್ಲೇ ಕುಸಿದು ಬಿದ್ದು ಅಕಾಲಿಕವಾಗಿ ನಿಧನರಾಗಿದ್ದಾರೆ. ಬುಧವಾರ ನಡೆದ ಈ ಘಟನೆಯು ಕ್ರೀಡಾಭಿಮಾನಿಗಳಲ್ಲಿ ಆಘಾತ ಮೂಡಿಸಿದ್ದು, ಅವರ ಗೌರವಾರ್ಥವಾಗಿ ರಾಜ್ಯದಾದ್ಯಂತ ಎಲ್ಲಾ ಕ್ರಿಕೆಟ್ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಈ ಮನಕಲಕುವ ಘಟನೆ ಸಂಭವಿಸಿದ್ದು ಖಲೀದ್ ಮೆಮೋರಿಯಲ್ 2ನೇ ಡಿವಿಷನ್ ಸ್ಕ್ರೀನಿಂಗ್ ಟೂರ್ನಮೆಂಟ್ ಪಂದ್ಯದ ವೇಳೆ. ವೆಂಗ್‌ನುವೈ ರೈಡರ್ಸ್ ಸಿಸಿ ತಂಡದ ಪರವಾಗಿ ಆಡುತ್ತಿದ್ದ ಲಾಲ್ರೆಮ್ರುಅಟಾ ಅವರು ಚಾವ್ನ್‌ಪುಯಿ ಇಲ್ಮೋವ್ ಸಿಸಿ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದಿದ್ದರು. ಪಂದ್ಯವು ಚುರುಕಿನಿಂದ ಸಾಗುತ್ತಿದ್ದ ಸಂದರ್ಭದಲ್ಲೇ ಅವರಿಗೆ ತೀವ್ರ ಆರೋಗ್ಯ ಸಮಸ್ಯೆ ಕಾಣಿಸಿಕೊಂಡು ಮೈದಾನದಲ್ಲೇ ಕುಸಿದು ಬಿದ್ದರು. ತಕ್ಷಣವೇ ಮೈದಾನದಲ್ಲಿದ್ದ ಸಿಬ್ಬಂದಿ ಮತ್ತು ಸಹ ಆಟಗಾರರು ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದರಾದರೂ, ವೈದ್ಯರ ಸತತ ಪ್ರಯತ್ನದ ಹೊರತಾಗಿಯೂ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಮಿಜೋರಾಂ ಕ್ರಿಕೆಟ್‌ನ ಸಕ್ರಿಯ ಧ್ವನಿ
ಕೆ ಲಾಲ್ರೆಮ್ರುಅಟಾ ಅವರು ಮಿಜೋರಾಂ ಕ್ರಿಕೆಟ್ ಇತಿಹಾಸದಲ್ಲಿ ಪ್ರಮುಖ ಹೆಸರಾಗಿದ್ದರು. ರಣಜಿ ಟ್ರೋಫಿಯಂತಹ ಪ್ರತಿಷ್ಠಿತ ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದ ಅವರು, ನಿವೃತ್ತಿಯ ನಂತರವೂ ಕ್ರಿಕೆಟ್‌ನೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಅವರು ರಾಜ್ಯ ಕ್ರಿಕೆಟ್ ಸಂಸ್ಥೆಯ ಹಿರಿಯ ಟೂರ್ನಮೆಂಟ್ ಸಮಿತಿಯ ಸದಸ್ಯರಾಗಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುತ್ತಿದ್ದರು. ಕೇವಲ ಆಟಗಾರನಾಗಿ ಮಾತ್ರವಲ್ಲದೆ, ತಳಮಟ್ಟದ ಕ್ರಿಕೆಟ್ ಬೆಳವಣಿಗೆಗೆ ಶ್ರಮಿಸಿದ ನಿಷ್ಠಾವಂತ ಸಂಘಟಕರಾಗಿ ಅವರು ಗುರುತಿಸಿಕೊಂಡಿದ್ದರು. ಅವರ ನಿಿಸ್ವಾರ್ಥ ಸೇವೆ ಮತ್ತು ಕ್ರೀಡಾಸ್ಫೂರ್ತಿಯನ್ನು ಅವರ ಸಹೋದ್ಯೋಗಿಗಳು ಮತ್ತು ಕಿರಿಯ ಆಟಗಾರರು ಸ್ಮರಿಸಿದ್ದಾರೆ.
ಗೌರವಾರ್ಥವಾಗಿ ಪಂದ್ಯಗಳ ರದ್ದು
ಲಾಲ್ರೆಮ್ರುಅಟಾ ಅವರ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ಮಿಜೋರಾಂ ಕ್ರಿಕೆಟ್ ಸಂಸ್ಥೆಯು (CAM) ತೀವ್ರ ಸಂತಾಪ ವ್ಯಕ್ತಪಡಿಸಿದೆ. ಅವರ ಗೌರವಾರ್ಥವಾಗಿ ಗುರುವಾರ ರಾಜ್ಯದಲ್ಲಿ ನಡೆಯಬೇಕಿದ್ದ ಎಲ್ಲಾ ಅಧಿಕೃತ ಕ್ರಿಕೆಟ್ ಪಂದ್ಯಗಳನ್ನು ರದ್ದುಗೊಳಿಸಲಾಗಿದೆ. ಇದರಲ್ಲಿ ಎರಡನೇ ಮತ್ತು ಮೂರನೇ ಡಿವಿಷನ್ ಸ್ಕ್ರೀನಿಂಗ್ ಟೂರ್ನಮೆಂಟ್‌ಗಳು ಹಾಗೂ ಸಮಗ್ರ ಅಂತರ ಶಾಲಾ ಕ್ರಿಕೆಟ್ ಪಂದ್ಯಗಳೂ ಸೇರಿವೆ. ರದ್ದಾದ ಈ ಪಂದ್ಯಗಳನ್ನು ಮುಂದಿನ ದಿನಗಳಲ್ಲಿ ಪುನರ್ ನಿಗದಿಪಡಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ. ಸಂಸ್ಥೆಯ ಅಧಿಕೃತ ಪ್ರಕಟಣೆಯಲ್ಲಿ ಲಾಲ್ರೆಮ್ರುಅಟಾ ಅವರ ಕುಟುಂಬಕ್ಕೆ ಸಾಂತ್ವನ ಹೇಳಲಾಗಿದ್ದು, ಅವರ ಅಗಲಿಕೆಯಿಂದ ರಾಜ್ಯ ಕ್ರಿಕೆಟ್ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ತಿಳಿಸಲಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಕಂಬನಿ
ಲಾಲ್ರೆಮ್ರುಅಟಾ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಕ್ರೀಡಾಪಟುಗಳು ಮತ್ತು ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ. ಮೈದಾನದಲ್ಲೇ ಪ್ರಾಣ ಬಿಟ್ಟ ಈ ಕ್ರೀಡಾಜೀವದ ಬಗ್ಗೆ ಹಲವರು ಭಾವುಕವಾಗಿ ಮಾತನಾಡಿದ್ದಾರೆ.
ʼಇದನ್ನೂ ಓದಿ : “ಡಬ್ಲ್ಯೂಪಿಎಲ್‌ನಲ್ಲಿ ಮಿಂಚಿದರೆ ವಿಶ್ವಕಪ್ ಬಾಗಿಲು ತೆರೆದುಕೊಳ್ಳುತ್ತದೆ” : ಯುವ ಆಟಗಾರ್ತಿಯರಿಗೆ ಸ್ಮೃತಿ ಮಂಧಾನಾ ಸಂದೇಶ



















