ಕಲಬುರಗಿ: ಗ್ರಾಪಂ ಮಾಜಿ ಸದಸ್ಯರೊಬ್ಬರನ್ನು ಹಾಡಹಗಲೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಈ ಘಟನೆ ಆಳಂದ (Alanda) ತಾಲೂಕಿನ ಜಿಡಗಾ ಕ್ರಾಸ್ ಹತ್ತಿರ ನಡೆದಿದೆ. ಪಡಸಾವಳಗಿ ಗ್ರಾಮದ ವಿಶ್ವನಾಥ್ ಜಮಾದಾರ್ ಕೊಲೆಯಾದ ಗ್ರಾಪಂ ಮಾಜಿ ಸದಸ್ಯ. ಬೈಕ್ ನಲ್ಲಿ ಬಂದಿದ್ದ ದುಷ್ಕರ್ಮಿಗಳು ಏಕಾಏಕಿ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.
ವಿಶ್ವನಾಥ್ ಜಮಾದಾರ್ ತಮ್ಮ ಮಗನನ್ನು ಶುಕ್ರವಾರ ಬಳಿಗ್ಗೆ ಶಾಲೆಗೆ ಬಿಟ್ಟು ಬರಲು ಹೋಗಿದ್ದರು. ಮಗನನ್ನು ಶಾಲೆಗೆ ಬಿಟ್ಟು ಜಿಡಗಾ ಕ್ರಾಸ್ ಹತ್ತಿರ ಬೈಕ್ ಮೇಲೆ ಬರುತ್ತಿದ್ದಾಗ ಬೈಕ್ ನಲ್ಲಿ ಬಂದಿದ್ದ ಅಪರಿಚಿತ ದುಷ್ಕರ್ಮಿಗಳು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ.
ಘಟನೆಯಲ್ಲಿ ವಿಶ್ವನಾಥ್ ತೆಲೆಗೆ ಮೂರು ಗುಂಡುಗಳು ಬಿದ್ದಿವೆ. ಪರಿಣಾಮ ತೀವ್ರ ರಕ್ತಸ್ರಾವವಾಗಿ ವಿಶ್ವನಾಥ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆನಂತರ ಅಲ್ಲಿಂದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ದಾರಿಯಲ್ಲಿ ಹೋಗುತ್ತಿದ್ದವರು ಪೊಲೀಸರಿಗೆ ಈ ಮಾಹಿತಿ ನೀಡಿದ್ದಾರೆ. ಕೂಡಲೇ ಆಳಂದ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ.
ಈ ವಿಚಾರ ತಿಳಿಯುತ್ತಿದ್ದಂತೆ ಕಲಬುರಗಿ ಎಸ್ಪಿ ಅಡ್ಡೂರು ಶ್ರೀನಿವಾಸಲು ಕೂಡ ಸ್ಥಳಕ್ಕೆ ನೀಡಿ ಪರೀಶಿಲನೆ ನಡೆಸಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಆಳಂದ ಪೊಲೀಸರು ಹಂತಕರ ಪತ್ತೆಗೆ ಬಲೆ ಬಿಸಿದ್ದಾರೆ. ಆಳಂದ ತಾಲೂಕಿನ ಕೋಲಿ ಸಮಾಜದ ಮುಖಂಡನ ಹತ್ಯೆಗೆ ಭಯದ ವಾತಾವರಣ ನಿರ್ಮಾಣವಾಗಿದೆ.