ಕೊಲ್ಕತ್ತಾ: ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಪ್ರಯಾಣ ಮಾಡುತ್ತಿದ್ದ ಕಾರು ಪಶ್ಚಿಮ ಬಂಗಾಳದ ದುರ್ಗಾಪುರ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿದೆ. ಕಾರ್ಯಕ್ರಮವೊಂದಕ್ಕೆ ತೆರಳಲು ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದ್ದು, ಅದೃಷವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಗಂಗೂಲಿ ಬೆಂಗಾವಲು ಪಡೆಯ 2 ವಾಹನಗಳಿಗೆ ಹಾನಿಯಾಗಿದೆ. ಬರ್ಧಮಾನ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಗಂಗೂಲಿ ತಮ್ಮ ರೇಂಜ್ ರೋವರ್ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದರು. ದುರ್ಗಾಪುರ ಹೆದ್ದಾರಿಯ ದಂತನ್‌ಪುರ ಎಂಬಲ್ಲಿ ಅವರ ಕಾರಿಗೆ ಲಾರಿ ಡಿಕ್ಕಿ ಹೊಡೆದಿದೆ.
ಬೆಂಗಾವಲು ಪಡೆಯ ವಾಹನದ ಸಮೀಪ ಲಾರಿ ಬಂದಿದ್ದರಿಂದ ಬ್ರೇಕ್ ಹಾಕಬೇಕಾಯಿತು, ಇದು ವಾಹನಗಳು ಒಂದಕ್ಕೊಂಡು ಡಿಕ್ಕಿ ಹೊಡೆದುಕೊಂಡಿವೆ. ಆದರೆ ಯಾವುದೇ ಪ್ರಾಣಾಪಾಯವಾಗಿಲ್ಲ. ಪರಿಸ್ಥಿತಿ ತಿಳಿಗೊಂಡ ನಂತರ ಗಂಭೀರ್ ತಾವು ತೆರಳಬೇಕಿದ್ದ ಕಾರ್ಯಕ್ರಮಕ್ಕೆ ತೆರಳಿದ್ದಾರೆ.
ವಿದ್ಯಾರ್ಥಿಗಳ ಜತೆ ಸಂವಾದ
ಅಪಘಾತದ ನಂತರ 15 ರಿಂದ 20 ನಿಮಿಷಗಳ ಕಾಲ ಗಂಗೂಲಿ ಅಲ್ಲಿಯೇ ಇದ್ದರು. ನಂತರ ಅವರು ಕಾರ್ಯಕ್ರಮಕ್ಕೆ ತೆರಳಿದ್ದಾರೆ. ಅಲ್ಲಿ ಅವರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ವಿಶ್ವವಿದ್ಯಾಲಯದ ಕಾರ್ಯಕ್ರಮದ ನಂತರ, ಗಂಗೂಲಿ ಮತ್ತೊಂದು ಕಾರ್ಯಕ್ರಮದಲ್ಲಿ ಭಾಗವಹಿಸಲು ವರ್ಧಮಾನ್‌ನಲ್ಲಿರುವ ಕ್ರೀಡಾಂಗಣಕ್ಕೆ ತೆರಳಿದ್ದಾರೆ.
ಗಂಗೂಲಿ ಪುತ್ರಿಯ ಕಾರು ಅಪಘಾತಕ್ಕೆ ಈಡಾಗಿತ್ತು
ಈ ಹಿಂದೆ ಗಂಗೂಲಿ ಪುತ್ರಿ ಸನಾ ಚಲಿಸುತ್ತಿದ್ದ ಕಾರಿಗೂ ಅಪಘಾತ ಸಂಭವಿಸಿತ್ತು. ಸನಾ ಪ್ರಯಾಣಿಸುತ್ತಿದ್ದ ಕಾರಿಗೆ ಬಸ್ ಡಿಕ್ಕಿ ಹೊಡೆದ ಘಟನೆ ಕೋಲ್ಕತ್ತಾದ ಡೈಮಂಡ್ ಹಾರ್ಬರ್ನ್ ನಲ್ಲಿ ನಡೆದಿತ್ತು. ಕೋಲ್ಕತ್ತಾದಿಂದ ರಾಯಚಕ್‌ಗೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿತ್ತು. ಸನಾ ಪ್ರಯಾಣಿಸುತ್ತಿದ್ದ ಕಾರಿಗೆ ಹಿಂದಿನಿಂದ ಬಸ್ ಗುದ್ದಿಕೊಂಡು ಹೋಗಿದೆ. ಸನಾ ಅವರು ಕಾರು ಚಲಾಯಿಸುತ್ತಿರಲಿಲ್ಲ. ಬದಲಾಗಿ ಡ್ರೈವರ್ ಕಾರು ಚಲಾಯಿಸುತ್ತಿದ್ದರು. ಕೊನೆಗೆ ಕಾರು ಡ್ರೈವರ್, ಬಸ್ ಚೇಸ್ ಮಾಡಿ ಬಸ್ ನಿಲ್ಲಿಸಿದ್ದಾನೆ. ನಂತರ ಬಸ್ ಚಾಲಕನ ಮೇಲೆ ಸನಾ ದೂರು ನೀಡಿದ್ದರು.