ನವದೆಹಲಿ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಿಂದ ಆತಿಥೇಯ ಪಾಕಿಸ್ತಾನ ತಂಡ ಹೊರಕ್ಕೆ ಬಿದ್ದಿದೆ. ಹೀಗಾಗಿ ತಂಡ ಸರ್ವ ದಿಕ್ಕುಗಳಿಂದ ಟೀಕೆಗಳನ್ನು ಎದುರಿಸುತ್ತಿದೆ. ಈ ತಂಡವನ್ನು ಕಟ್ಟಿಕೊಂಡು ಕ್ರಿಕೆಟ್ ಬಿಡಿ ಗಿಲ್ಲಿ-ದಾಂಡು ಆಡಿ ಗೆಲ್ಲುವುದು ಕಷ್ಟ ಎಂಬೆಲ್ಲ ಮಾತುಗಳು ಕೇಳಿ ಬರುತ್ತಿವೆ. ಏತನ್ಮಧ್ಯೆ, ಭಾರತ ತಂಡ ಮಾಜಿ ಆಟಗಾರ ಸುನೀಲ್ ಗವಾಸ್ಕರ್ ಮತ್ತೊಂದು ರೀತಿಯಲ್ಲಿ ಲೇವಡಿ ಮಾಡಿದ್ದಾರೆ. ಸದ್ಯದ ಪಾಕಿಸ್ತಾನ ತಂಡಕ್ಕೆ ಭಾರತದ ಬಿ ತಂಡವನ್ನು ಸಹ ಸೋಲಿಸಲು ಸಾಧ್ಯವಾಗುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭಾರತ ತಂಡ, ಭಾನುವಾರ ದುಬೈನಲ್ಲಿ ನಡೆದಿದ್ದ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಪಾಕಿಸ್ತಾನ ತಂಡವನ್ನು ಆರು ವಿಕೆಟ್‌ಗಳಿಂದ ಸೋಲಿಸಿತ್ತು. ಆ ಮೂಲಕ ಐಸಿಸಿ ಟೂರ್ನಿಗಳಲ್ಲಿನ ತಮ್ಮ ಸಾಂಪ್ರದಾಯಿಕ ಎದುರಾಳಿ ಮೇಲಿನ ಪ್ರಾಬಲ್ಯ ಮುಂದುವರಿಸಿದೆ.
ಈ ಕುರಿತು ‘ಸ್ಪೋರ್ಟ್ಸ್ ಟುಡೇ’ ಜೊತೆ ಮಾತನಾಡಿದ ಸುನೀಲ್ ಗವಾಸ್ಕರ್, “ಭಾರತದ ‘ಬಿ’ ತಂಡ, ಪಾಕಿಸ್ತಾನಕ್ಕೆ ಕಠಿಣ ಹೋರಾಟ ನೀಡಬಲ್ಲದು. ‘ಸಿ’ ತಂಡದ ಬಗ್ಗೆ ನನಗೆ ಖಚಿತವಿಲ್ಲ,” ಎಂದು ಹೇಳಿದ್ದಾರೆ. 1996ರ ನಂತರ ಮೊದಲ ಬಾರಿ ಐಸಿಸಿ ಟೂರ್ನಿಯನ್ನು ಆಯೋಜಿಸುತ್ತಿರುವ ಪಾಕಿಸ್ತಾನ, ಗ್ರೂಪ್ ಎ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ನ್ಯೂಜಿಲೆಂಡ್ ಜಯಗಳಿಸಿದ ನಂತರ ಚಾಂಪಿಯನ್ಸ್ ಟ್ರೋಫಿಯಿಂದ ಹೊರಬಿದ್ದಿದೆ.
ಒಂದೂ ಪಂದ್ಯ ಗೆದ್ದಿಲ್ಲ
ಪಾಕಿಸ್ತಾನ ತಂಡ ಇದುವರೆಗೆ ಎರಡು ಪಂದ್ಯ ಆಡಿದ್ದು ಎರಡರಲ್ಲೂ ಸೋತಿದೆ. ಪಾಕಿಸ್ತಾನ 2017 ರಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದಿತು ಆದರೆ, ಅಂದಿನಿಂದ ಅವರ ಕ್ರಿಕೆಟ್ ಗುಣಮಟ್ಟ ಕುಸಿಯುತ್ತಿದೆ. ಕಳೆದ ಎರಡು ಏಕದಿನ ವಿಶ್ವಕಪ್ ಟೂರ್ನಿಗಳಲ್ಲಿ ಪಾಕ್, ಐದನೇ ಸ್ಥಾನ ಗಳಿಸಿತ್ತು.
ದೇಶಿ ಕ್ರಿಕೆಟ್ ಭಾರತ ತಂಡಕ್ಕೆ ನೆರವು ನೀಡಿದೆ
ಭಾರತದ ಮಾಜಿ ನಾಯಕ ಗವಾಸ್ಕರ್ ಮಾತನಾಡಿ, “ಭಾರತ ತಂಡ ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಇಷ್ಟೊಂದು ಆಟಗಾರರನ್ನು ಹೇಗೆ ಸೃಷ್ಟಿಸಲು ಒಂದು ಕಾರಣವಿದೆ. ಅದುವೇ ಐಪಿಎಲ್. ಭಾರತೀಯ ಆಟಗಾರರು ರಣಜಿ ಟ್ರೋಫಿ ಸೇರಿದಂತೆ ದೇಶಿ ಕ್ರಿಕೆಟ್ ಟೂರ್ನಿಗಳಲ್ಲಿ ನಿರಂತರವಾಗಿ ಪಾಲ್ಗೊಳ್ಳುತ್ತಾರೆ. ಅದರ ಆಧಾರದ ಮೇಲೆ ಅವರು ಅಂತಿಮವಾಗಿ ಭಾರತ ತಂಡದ ಪರ ಆಡುತ್ತಾರೆ. ಪಾಕಿಸ್ತಾನ ಇದನ್ನು ನೋಡಿ ಕಲಿಯಬೇಕು. ಆ ತಂಡದಲ್ಲಿ ಬ್ಯಾಕ್ಅಪ್ ಆಟಗಾರರೇ ಇಲ್ಲ ಎಂದು ಹೇಳಿದ್ದಾರೆ.