ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ಹಾಗೂ ಕನ್ನಡಿಗ ಕೆ.ಎಲ್. ರಾಹುಲ್ ಕುರಿತು ವದಂತಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅದು ಎಷ್ಟು ಸತ್ಯ ಎಂಬುವುದು ಮಾತ್ರ ಬಹಿರಂಗವಾಗಿಲ್ಲ.
2024 ರ ಐಪಿಎಲ್ ಸಂದರ್ಭದಲ್ಲಿ ಗಾಯಕ್ಕೆ ತುತ್ತಾಗಿದ್ದ ರಾಹುಲ್, ಚೇತರಿಸಿಕೊಂಡ ನಂತರ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತದ ಪರ ಕಣಕ್ಕೆ ಇಳಿದಿದ್ದರು. ಆದರೆ ಲಂಕಾ ವಿರುದ್ಧದ ಸರಣಿಯಲ್ಲಿ ರಾಹುಲ್ ಪ್ರದರ್ಶನ ಹೇಳಿಕೊಳ್ಳುವ ಮಟ್ಟಿಗೆ ಇರಲಿಲ್ಲ. ಹೀಗಾಗಿ ಮೂರನೇ ಏಕದಿನ ಪಂದ್ಯದಿಂದ ರಾಹುಲ್ ರನ್ನು ಕೈ ಬಿಡಲಾಗಿತ್ತು. ಆದರೆ, ಈಗ ಕಳಪೆ ಪ್ರದರ್ಶನದಿಂದಾಗಿ ಅವರು ತಂಡದಲ್ಲಿ ಸ್ಥಾನ ಪಡೆಯುವುದು ಅನುಮಾನ ಎಂದೇ ಹೇಳಲಾಗುತ್ತಿದೆ. ಈ ಮಧ್ಯೆ ಕೆಎಲ್ ರಾಹುಲ್ ಎಂಬಂತೆ ಬಿಂಬಿಸಿರುವ ಇನ್ಸಟಾಗ್ರಾಮ್ ಪೋಸ್ಟ್ ವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ವೈರಲ್ ಆಗಿರುವ ಈ ಪೋಸ್ಟ್ ನಲ್ಲಿ, ‘ಸಾಕಷ್ಟು ಯೋಚಿಸಿದ ನಂತರ ನಾನು ವೃತ್ತಿಪರ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಲು ನಿರ್ಧರಿಸಿದ್ದೇನೆ. ಈ ನಿರ್ಧಾರವು ಸುಲಭವಲ್ಲ, ಏಕೆಂದರೆ ಅನೇಕ ವರ್ಷಗಳಿಂದ ಕ್ರಿಕೆಟ್ ನನ್ನ ಜೀವನದ ಪ್ರಮುಖ ಭಾಗವಾಗಿದೆ. ನನ್ನ ವೃತ್ತಿ ಜೀವನದುದ್ದಕ್ಕೂ ನನ್ನನ್ನು ಬೆಂಬಲಿಸಿದ ನನ್ನ ಕುಟುಂಬ, ಸ್ನೇಹಿತರು, ತಂಡದ ಸಹ ಆಟಗಾರರು ಮತ್ತು ಅಭಿಮಾನಿಗಳಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ಮೈದಾನದ ಒಳಗೆ ಮತ್ತು ಹೊರಗೆ ನಾನು ಪಡೆದ ಅನುಭವಗಳು ಮತ್ತು ನೆನಪುಗಳು ನಿಜವಾಗಿಯೂ ಬೆಲೆಕಟ್ಟಲಾಗದವು. ದೇಶವನ್ನು ಪ್ರತಿನಿಧಿಸಲು ಮತ್ತು ಅನೇಕ ಪ್ರತಿಭಾವಂತ ಕ್ರಿಕೆಟಿಗರೊಂದಿಗೆ ಆಡಿದ್ದು ನನಗೆ ಹೆಮ್ಮೆ ತಂದಿದೆ. ಈ ಅದ್ಭುತ ಪ್ರಯಾಣದ ಭಾಗವಾಗಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು’ ಎಂದು ಬರೆದಿದೆ.
ಆದರೆ, ರಾಹುಲ್ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿರುವುದು ನಿಜ. ಆದರೆ ಆ ಪೋಸ್ಟ್ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯಕ್ಕೆ ಸಂಬಂಧಿಸಿದಲ್ಲ. ಬದಲಿಗೆ ಆ ಪೋಸ್ಟ್ ನಲ್ಲಿ ‘ನಾನು ನಿಮ್ಮ ಬಳಿ ಏನನ್ನೋ ಹೇಳಬೇಕಿದೆ.. ಕಾಯುತ್ತಿರಿ‘ (I have an announcement to make, stay tuned) ಎಂದು ಬರೆದುಕೊಂಡಿದ್ದಾರೆ. ಆದರೆ, ಕಿಡಿಗೇಡಿಗಳು ಮಾತ್ರ ಈ ರೀತಿ ತಿರುಚಿದ್ದಾರೆ ಎನ್ನಲಾಗಿದೆ. ಆದರೆ, ನಿಜವಾಗಿಯೂ ರಾಹುಲ್ ಏನು ಹೇಳುತ್ತಾರೆ ಎಂಬುವುದನ್ನು ಕಾಯ್ದು ನೋಡಬೇಕಿದೆ.