ಓಡಿಶಾ : ಪೊಲೀಸ್ ವಾಹನ ಮತ್ತು ಟ್ರಕ್ ನಡುವೆ ಒಡಿಶಾದ ಜಾರ್ಸುಗುಡ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 49 ರಲ್ಲಿ ಇಂದು ಭೀಕರ ಅಪಘಾತ ಸಂಭವಿಸಿದ ಪರಿಣಾಮ ಕನಿಷ್ಠ ಐವರು ಪೊಲೀಸರು ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಜಾರ್ಸುಗುಡ ಸದರ್ ಪೊಲೀಸ್ ಠಾಣಾ ವ್ಯಾಪ್ತಿಯ ಒಡಿಶಾ ಆದರ್ಶ ವಿದ್ಯಾಲಯ ಬಳಿ ಭಾನುವಾರ ನಸುಕಿನ ಜಾವ ಈ ಘಟನೆ ಸಂಭವಿಸಿದೆ. ಮೃತರನ್ನು ಗೃಹರಕ್ಷಕ ಭಕ್ತ ಮಿರ್ಧಾ, ಕಾನ್‌ಸ್ಟೆಬಲ್‌ಗಳಾದ ಕಾಶಿರಾಮ್ ಭೋಯ್, ದೇವದತ್ ಸಹಾ, ಹವಾಲ್ದಾರ್ ಲಿಂಗರಾಜ್ ಧುರುವಾ ಮತ್ತು ಡಿಎಸ್‌ಐ ನಿರಂಜನ್ ಕುಜುರ್ ಎಂದು ಗುರುತಿಸಲಾಗಿದೆ.
ಎದುರುಬದುರು ಸಂಚರಿಸುತ್ತಿದ್ದ ಪೊಲೀಸರ ಬೊಲೆರೋ ವಾಹನ ಮತ್ತು ಟ್ರಕ್ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಭಾನುವಾರ ಬೆಳಗ್ಗೆ ಭೀಕರ ಅಪಘಾತ ಸಂಭವಿಸಿದೆ. ಬೊಲೆರೋದಲ್ಲಿದ್ದ ಐವರು ಪೊಲೀಸರು ಸಾವನ್ನಪ್ಪಿದ್ದಾರೆ, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಜಾರ್ಸುಗುಡ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಧುಸಿಕ್ತ ಮಿಶ್ರಾ ತಿಳಿಸಿದ್ದಾರೆ.
ಗಾಯಾಳು ಪೊಲೀಸರು ಮೊದಲು ಹತ್ತಿರದ ಬುರ್ಲಾ ಆಸ್ಪತ್ರೆಗೆ ದಾಖಲಿಸಿ, ಪ್ರಾಥಮಿಕ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ನಂತರ ಬರ್ಗಢ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಿದರು. ಟ್ರಕ್ ಚಾಲಕ ಕೂಡ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಇದನ್ನೂ ಓದಿ: ಮಾರುಕಟ್ಟೆಗೆ ಲಗ್ಗೆಯಿಡಲು ಸಜ್ಜಾದ 2026ರ ಮಾರುತಿ ಸುಜುಕಿ ಬ್ರೆಝಾ ಫೇಸ್‌ಲಿಫ್ಟ್



















