ಬೆಂಗಳೂರು: ರಾಜ್ಯದ ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಅಧೀನದ ‘ರಾಜ್ಯ ಕ್ರೀಡಾ ಪ್ರಾಧಿಕಾರ’ದಲ್ಲಿ ಫಿಟ್ನೆಸ್ ತರಬೇತುದಾರರ ಹುದ್ದೆಗಳು (SAK Recruitment 2025) ಖಾಲಿ ಇದ್ದು, ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ಒಟ್ಟು ಹಿರಿಯ ಕ್ರೀಡಾ ವಸತಿ ನಿಲಯದ ಕ್ರೀಡಾಪಟುಗಳಿಗೆ 14 ಫಿಟ್ನೆಸ್ ತರಬೇತುದಾರರ ಹುದ್ದೆಗಳು ಖಾಲಿ ಇವೆ. ಅಭ್ಯರ್ಥಿಗಳು ಏಪ್ರಿಲ್ 15ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಒಂದು ವರ್ಷದ ಅವಧಿಗೆ ಕಾರ್ಯನಿರ್ವಹಿಸಬಹುದಾಗಿದೆ. ಸೇವೆಯ ವೇಳೆ ಆಕರ್ಷಕ ವೇತನ ನೀಡಲಾಗುವುದು ಎಂದು ತಿಳಿಸಲಾಗಿದೆ. 1ನೇ ತರಗತಿಯಿಂದ 10ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿದ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಒಂದು ವೇಳೆ ಯಾವುದೇ ಅರ್ಹ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದರೆ ಇತರೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ವಯೋಮಿತಿ ಗರಿಷ್ಠ 58 ವರ್ಷ ಆಗಿದೆ.
ಏಪ್ರಿಲ್ 15ರ ಗಡುವು
ಪ್ರಾಧಿಕಾರದ ವೆಬ್ ಸೈಟ್ ನಲ್ಲಿ ಅರ್ಜಿ ಲಭ್ಯ ಇದೆ. ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಯನ್ನು ಏಪ್ರಿಲ್ 15ರ ಸಂಜೆ 4 ಗಂಟೆಯೊಳಗೆ ಸಲ್ಲಿಸಬೇಕಾಗಿರುತ್ತದೆ. ಆಯ್ಕೆ ಪ್ರಕ್ರಿಯೆಯಲ್ಲಿ ನಿಗದಿಪಡಿಸಿರುವ ಅರ್ಹತೆ ಮತ್ತು ಷರತ್ತು ಪೂರೈಸದ ಕಾರಣ ಅಂತಹ ಅಭ್ಯರ್ಥಿಗಳು ಸಂದರ್ಶನಕ್ಕೆ ಆಯ್ಕೆ ಮಾಡಲಾಗುವುದಿಲ್ಲ. ಅರ್ಹತಾ ಮಾನದಂಡ ಪರಿಶೀಲಿಸಬೇಕು. ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಕೆಗೆ ಯಾವುದೇ ಶುಲ್ಕ ಇರುವುದಿಲ್ಲ ಎಂದು ಇಲಾಖೆ ತಿಳಿಸಿದೆ.
ಅರ್ಜಿ ಸಲ್ಲಿಕೆಯ ವಿಳಾಸ
ಆಸಕ್ತರು ಭರ್ತಿ ಮಾಡಿದ ಅರ್ಜಿ ಹಾಗೂ ಅಗತ್ಯ ದಾಖಲೆಗಳನ್ನು ದೃಢೀಕರಣದೊಂದಿಗೆ ರಿಜಿಸ್ಟರ್ ಅಂಚೆ ಮೂಲಕ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಬೇಕು. ‘ಮಹಾ ನಿರ್ದೇಶಕರು, ಕರ್ನಾಟಕ ಕ್ರೀಡಾ ಪ್ರಾಧಿಕಾರ, ರಾಜ್ಯ ಯುವ ಕೇಂದ್ರ, ನೃಪತುಂಗ ರಸ್ತೆ, ಬೆಂಗಳೂರು-560001’ ಈ ವಿಳಾಸಕ್ಕೆ ಕಳುಹಿಸಬೇಕು.
ಲಕೋಟೆಯ ಮೇಲೆ “ಮಾಸಿಕ ಸಂಚಿತ ವೇತನ, ಗುತ್ತಿಗೆ ಆಧಾರದ ಮೇಲೆ ಒಂದು ವರ್ಷದ ಅವಧಿಯವರೆಗೆ ಫಿಟೈಸ್ ತರಬೇತುದಾರರ ಹುದ್ದೆಯ ನೇಮಕಾತಿ” ಎಂದು ಬರೆದು ಅರ್ಜಿ ಸಲ್ಲಿಸುವಂತೆ ತಿಳಿಸಲಾಗಿದೆ. ಜತೆಗೆ ಅರ್ಜಿಯನ್ನು ಭರ್ತಿಮಾಡುವ ಮತ್ತು ಸಲ್ಲಿಸುವ ಮುನ್ನ ಅಧಿಸೂಚನೆಯಲ್ಲಿ ತಿಳಿಸಿರುವ ಸೂಚನೆಗಳನ್ನು ಪರಿಶೀಲಿಸಬೇಕು.
ಷರತ್ತುಗಳು ಇವೆ
ನೇಮಕಾತಿಯಾದ ನಂತರ ಮತ್ತು ಸಂದರ್ಭಾನುಸಾರ ಅಭ್ಯರ್ಥಿಗಳನ್ನು ರಾಜ್ಯದ ಯಾವುದೇ ಸ್ಥಳಕ್ಕೆ ನಿಯುಕ್ತಿಗೊಳಿಸಬಹುದು. ಇದಕ್ಕೆ ಒಪ್ಪಿಗೆ ಇರುವವರು ಅರ್ಜಿ ಸಲ್ಲಿಸಬೇಕು. ಆಯ್ಕೆಯಾಗುವ ಎಲ್ಲ ಅಭ್ಯರ್ಥಿಗಳು ಈ ನಿರ್ಧಾರಕ್ಕೆ ಬದ್ಧರಾಗಿರಬೇಕು. ರಾಜ್ಯದ ಯಾವುದೇ ಸ್ಥಳದಲ್ಲಿ ಕಾರ್ಯ ನಿರ್ವಹಿಸಲು ಸಿದ್ಧರಾಗಿರಬೇಕು. ಪ್ರಾಧಿಕಾರವೇ ನೇಮಕಾತಿ ರದ್ದುಪಡಿಸುವ ಅಧಿಕಾರ ಸಹ ಹೊಂದಿರುತ್ತದೆ.