ಉತ್ತರ ಕನ್ನಡ: ಇದೇ ಮೊದಲ ಬಾರಿಗೆ ಕಾಫಿ ಬೆಳೆಗೆ ಹರಾಜು ಕೇಂದ್ರ ಸ್ಥಾಪಿಸಲು ನಿರ್ಧರಿಸಲಾಗಿದೆ.
ರಾಜ್ಯದ ಮಲೆನಾಡು ಪ್ರದೇಶದಲ್ಲಿ ಕಾಫಿ ಪ್ರಮುಖ ಬೆಳೆಗಳಲ್ಲೊಂದಾಗಿದೆ. ಅಡಕೆ ತೋಟಗಳಲ್ಲಿ ಉಪಬೆಳೆಯಾಗಿ ಕಾಫಿ ಬೆಳೆಯಲಾಗುತ್ತದೆ. ಶಿರಸಿಯಲ್ಲಿ ಇದೇ ಮೊದಲ ಬಾರಿಗೆ ಸಹಕಾರಿ ವ್ಯವಸ್ಥೆಯಡಿ ರೈತರಿಗೆ ಈ ಸೌಲಭ್ಯ ಕಲ್ಪಿಸಲಾಗುತ್ತಿದೆ.
ಕೃಷಿ ಉಪ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿ ರಾಜ್ಯದಲ್ಲಿ ಮಾದರಿಯಾಗಿರುವ ನಗರದ ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿ ಸಂಸ್ಥೆ ಈ ನಿಟ್ಟಿನಲ್ಲಿ ಹೆಜ್ಜೆ ಇಡುತ್ತಿದೆ. ಜ. 28ರಂದು ಈ ಹರಾಜು ಕೇಂದ್ರ ಆರಂಭಿಸುತ್ತಿದ್ದು, ರೈತರು ಬೆಳೆದ ಕಾಫಿ ಬೆಳೆಯನ್ನು ಟೆಂಡರ್ ವ್ಯವಸ್ಥೆಗೆ ತಂದು ಮಾರಾಟ ಮಾಡಬಹುದಾಗಿದೆ.
ಈ ಹಿಂದೆ ಕಾಫಿಗೆ ನೇರ ಖರೀದಿ ವ್ಯವಸ್ಥೆ
ರಾಜ್ಯದಲ್ಲಿ ಕಾಫಿ ಕೂಡ ಪ್ರಮುಖ ಬೆಳೆಯಾಗಿದೆ. ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಈ ಬೆಳೆಯನ್ನು ಬೆಳೆಯಲಾಗುತ್ತಿದೆ. ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಮಡಿಕೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಾಫಿ ಬೆಳೆಯಲಾಗುತ್ತದೆ. ಆದರೆ ಬೆಂಗಳೂರಿನಲ್ಲಿ ಕಾಫಿ ಬೋರ್ಡ್‌ನವರ ಹರಾಜು ಕೇಂದ್ರ ಹೊರತುಪಡಿಸಿದರೆ ಈ ವ್ಯವಸ್ಥೆ ಬೇರೆಲ್ಲೂ ಇರಲಿಲ್ಲ. ಈಗ ಈಗ ಹರಾಜು ಕೇಂದ್ರ ತೆರೆಯಲಾಗಿದೆ. ಇದರಿಂದಾಗಿ ಕಾಫಿಗೂ ಪೈಪೋಟಿ ಬೆಲೆ ಸಿಗುವಂತಾಗುತ್ತದೆ ಎಂಬುವುದು ರೈತರ ಬಯಕೆಯಾಗಿದೆ.
ಇದರಿಂದಾಗಿ ಗುಣಮಟ್ಟಕ್ಕೆ ತಕ್ಕಂತೆ ದರ ರೈತರ ಕೈಗೆ ಸಿಗಬಹುದು. ಇತ್ತೀಚೆಗೆ ಕಾಫಿಗೆ ದೊಡ್ಡ ದರ ಬಂದಿದೆ. ರೊಬೆಸ್ಟೊ, ಅರೆಬಿಕಾ ತಳಿಗಳಿಗೆ ಕೆಜಿಗೆ 200ರೂ.ಗಿಂತ ಜಾಸ್ತಿಯಾಗಿದೆ. ಅಂದರೆ ಕ್ವಿಂಟಲ್‌ಗೆ 20ಸಾವಿರ ರೂ.ಗಿಂತ ಹೆಚ್ಚು ಬೆಲೆ ಸಿಗುತ್ತಿದೆ. ಕಳೆದ ವರ್ಷ ಕೆಜಿಗೆ 100ರೂ.ಒಳಗೆ ಇತ್ತು. ಈಗ ದುಪ್ಪಟ್ಟು ಬೆಲೆ ಸಿಗುತ್ತಿದೆ. ಕಾಫಿ ಬೆಳೆ ಯೂರೋಪಿಯನ್ ದೇಶಗಳಿಗೆ ಹೆಚ್ಚು ರಫ್ತಾಗುತ್ತಿದ್ದು, ಭಾರತದ ಕಾಫಿಗೆ ಒಳ್ಳೆಯ ದರ ಬಂದಿದೆ. ಹೀಗಾಗಿ ಕರ್ನಾಟಕದ ಕಾಫಿ ಬೆಳೆಗಾರರು ಖುಷಿ ಪಡುವಂತಾಗಿದೆ.