ಬೆಂಗಳೂರು: ಲಾಡ್ಜ್ ವೊಂದರಲ್ಲಿ ಅಗ್ನಿ ಅವಘಡ ಸಂಭವಿಸಿ ಯುವಕ ಮತ್ತು ಯುವತಿ ಸಾವನ್ನಪ್ಪಿರುವ ಘಟನೆ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಗದಗ ಮೂಲದ ರಮೇಶ್ ಹಾಗೂ ಹುನಗುಂದ ಮೂಲದ ಕಾವೇರಿ ಬಡಿಗೇರ್ ಸಾವನ್ನಪ್ಪಿದ ದುದೈರ್ವಿಗಳು.
ಯಲಹಂಕ ನ್ಯೂಟೌನ್ ಠಾಣಾ ವ್ಯಾಪ್ತಿಯಲ್ಲಿರುವ ಕಿಚನ್ ಫ್ಯಾಮಿಲಿ ರೆಸ್ಟೋರೆಂಟ್ನ ಕಟ್ಟಡದ ಮೂರನೇ ಮಹಡಿಯಲ್ಲಿ ಲಾಡ್ಜ್ನ ಕೊಠಡಿಯಲ್ಲಿ ನಿನ್ನೆ (ಗುರುವಾರ) ಸಂಜೆ 5.30 ರ ಸುಮಾರಿಗೆ ಕಾಣಿಸಿಕೊಂಡ ಬೆಂಕಿಯಿಂದಾಗಿ ಹೊರಬರಲಾಗದೇ ಒಳಗೆ ಸಿಲುಕಿದ್ದಾರೆ. ದುರ್ಘಟನೆಯಲ್ಲಿ ರಮೇಶ್ ಸುಟ್ಟು ಕರಕಲಾದರೆ ಯುವತಿ ಕಾವೇರಿ ದಟ್ಟವಾಗಿ ಆವರಿಸಿಕೊಂಡ ಬೆಂಕಿಯ ಹೊಗೆಯಿಂದಾಗಿ ಉಸಿರಾಟ ತೊಂದರೆಯಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ಸಂಬಂಧ ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಈಶಾನ್ಯ ವಿಭಾಗದ ಡಿಸಿಪಿ ವಿ.ಜೆ.ಸಜೀತ್, ಯಲಹಂಕದ ಕಿಚನ್ 6 ಎನ್ನುವ ರೆಸ್ಟೋರೆಂಟ್ ಕಟ್ಟಡದ ಮೂರನೇ ಮಹಡಿಯಲ್ಲಿರುವ ಲಾಡ್ಜ್‌ನಲ್ಲಿ ದುರ್ಘಟನೆ ಸಂಭವಿಸಿದೆ. ಅವಾಂತರದಲ್ಲಿ ಕೊಠಡಿಯಲ್ಲಿದ್ದ ಯುವಕ-ಯುವತಿ ಸಾವನ್ನಪ್ಪಿದ್ದಾರೆ. ಕೊಠಡಿಯಲ್ಲಿ ಹೇಗೆ ಬೆಂಕಿ ಕಾಣಿಸಿಕೊಂಡಿದೆ ಎಂಬುದರ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಅಗ್ನಿಶಾಮಕ ತಂಡ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯ (ಎಫ್ಎಸ್ ಎಲ್ ) ತಂಡವು ಸ್ಥಳದಲ್ಲಿ ತಪಾಸಣೆ ನಡೆಸುತ್ತಿದ್ದು, ಅವರು ನೀಡುವ ವರದಿ ಬಳಿಕ ಸತ್ಯಾಂಶ ಗೊತ್ತಾಗಲಿದೆ ಎಂದರು.
ಇಂದು ಮಧ್ಯಾಹ್ನ ಲಾಡ್ಜ್ ಗೆ ಬಂದಿದ್ದಾರೆ. ಆಧಾರ್ ಕಾರ್ಡ್ ನೀಡಿ ರಮೇಶ್ ಬುಕ್ ಮಾಡಿದ್ದಾರೆ. ಲಾಡ್ಜ್ ನಲ್ಲಿ 6 ರೂಮ್ ಗಳಿವೆ. ಒಂದು ಕೊಠಡಿಯಲ್ಲಿ ಇಬ್ಬರು ಹೊರತುಪಡಿಸಿ ಬೇರೆ ಯಾರೂ ಇರಲಿಲ್ಲ. ಪೆಟ್ರೋಲ್ ಸುರಿದು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಬರುತ್ತಿದೆ. ಈ ಆಯಾಮದಲ್ಲಿ ತನಿಖೆ ನಡೆಸಲಾಗುವುದು ಎಂದು ಡಿಸಿಪಿ ತಿಳಿಸಿದ್ದಾರೆ.