ಸಂಸದ ಡಾ.ಕೆ. ಸುಧಾಕರ್ ಸೇರಿದಂತೆ ಮೂವರ ವಿರುದ್ಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.
ಜಿಪಂ ಮುಖ್ಯ ಲೆಕ್ಕಾಧಿಕಾರಿಯ ಗುತ್ತಿಗೆ ಕಾರು ಚಾಲಕ ಬಾಬು ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ ಐಆರ್ ದಾಖಲಾಗಿದೆ. ಸಂಸದರ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲಾಗಿದೆ. ಅಲ್ಲದೇ, ಆತ್ಮಹತ್ಯೆಗೂ ಮುನ್ನ ಚಾಲಕ ಬಾಬು ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದಾರೆನ್ನಲಾಗಿರುವವರ ವಿರುದ್ಧ ಕೂಡ ಎಫ್ ಐಆರ್ ದಾಖಲಾಗಿದೆ. ಡಾ. ಕೆ. ಸುಧಾಕರ್, ಚಿಕ್ಕಕಾಡಿಗೇನಹಳ್ಳಿ ನಾಗೇಶ್ ಮತ್ತು ಮಂಜುನಾಥ್ ವಿರುದ್ಧವೂ ಎಫ್‌ಐಆರ್ ದಾಖಲಾಗಿದೆ.
ನಗರದ ಬಾಪೂಜಿನಗರದ ನಿವಾಸಿ ಬಾಬು (33) ಜಿಪಂ ಮುಖ್ಯ ಲೆಕ್ಕಾಧಿಕಾರಿಯ ಗುತ್ತಿಗೆ ಕಾರು ಚಾಲಕನಾಗಿದ್ದ. ಆದರೆ, ಗುರುವಾರ ಬೆಳಗ್ಗೆ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಸರ್ಕಾರಿ ಕೆಲಸ ಕೊಡಿಸುವುದಾಗಿ ವಂಚಿಸಿ ಸಂಸದ ಡಾ. ಕೆ.ಸುಧಾಕರ್ ಆಪ್ತ 40 ಲಕ್ಷ ರೂ.ಗೆ ಬೇಡಿಕೆ ಇಟ್ಟು 25 ಲಕ್ಷ ರೂ. ಪಡೆದಿದ್ದರು. ಹೀಗಾಗಿ ನನ್ನ ಸಾವಿಗೆ ಸಂಸದ ಡಾ.ಕೆ. ಸುಧಾಕರ್, ನಾಗೇಶ್ ಹಾಗೂ ಮಂಜುನಾಥ್ ಕಾರಣ ಎಂದು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಮೃತ ಬಾಬು ಪತ್ನಿ ಶಿಲ್ಪಾ ನೀಡಿದ ದೂರಿನ ಹಿನ್ನೆಲೆಯಲ್ಲಿ ಸಂಸದ ಡಾ.ಕೆ. ಸುಧಾಕರ್ ಸೇರಿದಂತೆ ಮೂವರ ವಿರುದ್ಧ ಹಣ ವಂಚನೆ, ಬೆದರಿಕೆ, ಮಾನಸಿಕ ಹಿಂಸೆ, ನಿಂದನೆ, ಆತ್ಮಹತ್ಯೆಗೆ ಪ್ರೇರಣೆ, ದಲಿತ ವ್ಯಕ್ತಿ ಮೇಲೆ ದೌರ್ಜನ್ಯ ಪ್ರಕರಣದಡಿ ಪ್ರಕರಣ ದಾಖಲಾಗಿದೆ. ಹೀಗಾಗಿ ಸಂಸದರನ್ನು ಕೂಡಲೇ ಬಂಧಿಸಬೇಕೆಂದು ಕಾಂಗ್ರೆಸ್ ನಾಯಕರು ಒತ್ತಾಯಿಸಿದ್ದಾರೆ.