ಬೆಂಗಳೂರು: ಕುರುಬರನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರ್ಪಡೆ ಮಾಡುವ ವಿಚಾರ ಸಂಬಂಧ ಹೇಳಿಕೆ ನೀಡಿದ್ದ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹಾಗೂ ಮೈಸೂರಿನ ಕೃಷ್ಣರಾಜ ಕ್ಷೇತ್ರದ ಬಿಜೆಪಿ ಶಾಸಕ ಶ್ರೀವತ್ಸ ಅವರ ವಿರುದ್ಧ ವಿಧಾನಸೌಧ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಕರ್ನಾಟಕ ಪ್ರದೇಶ ಕುರುಬರ ಎಸ್‌ಟಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಸಿದ್ದಣ್ಣ ತೇಜಿ ಅವರು ನೀಡಿದ ದೂರಿನನ್ವಯ ಭಾರತೀಯ ನ್ಯಾಯ ಸಂಹಿತೆ(BNS) 353(2) (ಎರಡು ಸಮುದಾಯಗಳ ನಡುವೆ ದ್ವೇಷ ಬಿತ್ತುವ ಹೇಳಿಕೆ) ಅಡಿ ಎಫ್‌ಐಆರ್ ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇವರಿಬ್ಬರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಬೇಕೆಂದು ಶುಕ್ರವಾರ ಬೆಳಗ್ಗೆ ಡಿಜಿ & ಐಜಿಪಿಯವರನ್ನು ಭೇಟಿಯಾಗಿ ಸಿದ್ದಣ್ಣ ತೇಜಿ ಅವರು ದೂರು ನೀಡಿದ್ದರು. ಆ ದೂರನ್ನು ಸಂಬಂಧಿಸಿದ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು.
ಕುರುಬರನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರ್ಪಡೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಛಲವಾದಿ ನಾರಾಯಣಸ್ವಾಮಿ ಹಾಗೂ ಬೆಂಗಳೂರು, ಮೈಸೂರಿನಲ್ಲಿ ಶ್ರೀವತ್ಸ ಅವರು ಹೇಳಿಕೆ ನೀಡಿದ್ದರು. ಸಿಎಂ ಸಿದ್ದರಾಮಯ್ಯ ಅವರನ್ನು ವಿರೋಧಿಸುವ ಭರದಲ್ಲಿ ಇಡೀ ಕುರುಬ ಸಮಾಜಕ್ಕೆ ಅವಮಾನ ಹಾಗೂ ದೌರ್ಜನ್ಯ ಎಸಗಿದ್ದಾರೆ. ಪರಿಶಿಷ್ಟ ಪಂಗಡದವರು ಹಾಗೂ ವಾಲ್ಮೀಕಿ ಸಮಾಜದವರು ಕುರುಬ ಸಮಾಜದ ಮೇಲೆ ದಂಗೆ ಎಳಬೇಕು ಎನ್ನುವ ರೀತಿಯಲ್ಲಿ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳ ಮೂಲಕ ಹೇಳಿಕೆ ನೀಡಿದ್ದಾರೆ. ಸಮುದಾಯದ ಜನರನ್ನು ಪ್ರಚೋದಿಸುವ ಮೂಲಕ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಹಾಳು ಮಾಡಲು ಪ್ರಯತ್ನಿಸಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಸಿದ್ದಣ್ಣ ತೇಜಿ ಅವರು ನೀಡಿದ ದೂರು ಆಧರಿಸಿ ಎಫ್‌ಐಆರ್ ದಾಖಲಾಗಿದೆ.