ಬೆಂಗಳೂರು: ಕೊನೆಗೂ ಬಸ್ ಟಿಕೆಟ್ ದರ ಏರಿಕೆಗೆ ಸರ್ಕಾರ ಅಸ್ತು ಎಂದಿದೆ. ಈ ಕುರಿತು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ಬಸ್ ಪ್ರಯಾಣ ದರವನ್ನು ಶೇ. 15 ರಷ್ಟು ಏರಿಕೆ ಮಾಡಿ ಆದೇಶ ಹೊರಡಿಸಲಾಗಿದೆ. ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಸಚಿವ ಹೆಚ್.ಕೆ. ಪಾಟೀಲ್, ಬಸ್ ಟಿಕೆಟ್ ದರ ಹೆಚ್ಚಳಕ್ಕೆ ಸಚಿವ ಸಂಪುಟ ನಿರ್ಧರಿಸಿದೆ. ಜ. 5ರಿಂದ ಪರಿಷ್ಕೃತ ಟಿಕೆಟ್ ದರ ಅನ್ವಯವಾಗಲಿದೆ. 4 ಸಾರಿಗೆ ನಿಗಮಗಳ ಟಿಕೆಟ್ ದರ ಪರಿಷ್ಕರಿಸಿದ್ದೇವೆ. ಹೀಗಾಗಿ ಟಿಕೆಟ್ ದರ ಶೇ.15ರಷ್ಟು ಹೆಚ್ಚಿಸಲು ಅನುಮೋದಿಸಲಾಗಿದೆ. ಟಿಕೆಟ್ ದರ ಹೆಚ್ಚಳದಿಂದಾಗಿ ಪ್ರತಿ ದಿನ 7.84 ಕೋಟಿ ರೂ. ಆದಾಯ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದಿದ್ದಾರೆ.
ಸಚಿವ ರಾಮಲಿಂಗಾ ರೆಡ್ಡಿ ಮಾತನಾಡಿ, ಐದು ವರ್ಷಗಳ ಹಿಂದೆ ಬಸ್ ದರ ಏರಿಕೆ ಮಾಡಿತ್ತು. ಆದರೆ, ಈಗ ಖರ್ಚು ವೆಚ್ಚ ಕೂಡ ಹೆಚ್ಚಾಗಿರುವುದರಿಂದಾಗಿ ಶೇ. 15ರಷ್ಟು ಏರಿಕೆ ಮಾಡಲಾಗಿದೆ ಎಂದಿದ್ದಾರೆ.
ಶಕ್ತಿ ಯೋಜನೆಯಿಂದ ನಮಗೆ ಲಾಭ ಆಗಿದೆ. ಬಿಜೆಪಿ ಸರ್ಕಾರ ಸಾವಿರಾರು ಕೋಟಿ ರೂ. ಸಾಲ ಬಿಟ್ಟು ಹೋಗಿದೆ. ನಮ್ಮ ಸರ್ಕಾರದಲ್ಲಿ ವೇತನಕ್ಕೆ ಯಾವುದೇ ಸಮಸ್ಯೆ ಆಗಿಲ್ಲ. ಸರಿಯಾದ ಸಮಯಕ್ಕೆ ಸಂಬಳ ಹಾಕಲಾಗಿದೆ. ಹಿಂದಿನ ಸರ್ಕಾರದಲ್ಲಿ ಸಂಬಳದ ಸಮಸ್ಯೆಯಾಗಿತ್ತು. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಬಸ್ ಟಿಕೆಟ್ ದರ ಕಡಿಮೆ ಇದೆ ಎಂದು ಹೇಳಿದ್ದಾರೆ.