ಅಹಮದಾಬಾದ್: ಸೀರೆ, ಹಣಕ್ಕಾಗಿ ಶುರುವಾದ ಜಗಳ ವಧುವಿನ ಕೊಲೆಯಲ್ಲಿ ಅಂತ್ಯವಾದ ಆಘಾತಕಾರಿ ಘಟನೆ ಗುಜರಾತ್‌ನ ಭಾವನಗರದಲ್ಲಿ ಶನಿವಾರ ನಡೆದಿದೆ.
ಪ್ರಭುದಾಸ್ ಸರೋವರದ ಟೆಕ್ರಿ ಚೌಕ್ ಬಳಿ ನವಜೋಡಿಗಳ ನಡುವೆ ಸೀರೆ ಮತ್ತು ಹಣದ ಬಗ್ಗೆ ನಡೆದ ಜಗಳದಲ್ಲಿ ಈ ಘಟನೆ ನಡೆದಿದ್ದು, ಆರೋಪಿಯನ್ನು ಸಜನ್ ಬರಯ್ಯ ಎಂದು ಗುರುತಿಸಲಾಗಿದ್ದು, ಸೋನಿ ಹಿಮ್ಮತ್ ರಾಥೋಡ್ ಕೊಲೆಯಾದ ದುರ್ದೈವಿ. ಪೊಲೀಸರ ಪ್ರಕಾರ, ಆರೋಪಿ ಸಜನ್ ಬರಯ್ಯ ಮತ್ತು ಸೋನಿ ಹಿಮ್ಮತ್ ರಾಥೋಡ್ ಕಳೆದ ಒಂದೂವರೆ ವರ್ಷಗಳಿಂದ ಒಟ್ಟಿಗೆ ವಾಸಿಸುತ್ತಿದ್ದರು. ಅವರಿಬ್ಬರ ನಿಶ್ಚಿತಾರ್ಥ ನಡೆದಿದ್ದು, ಹೆಚ್ಚಿನ ಧಾರ್ಮಿಕ ವಿಧಿಗಳು ಪೂರ್ಣಗೊಂಡಿತ್ತು. ಶನಿವಾರ ರಾತ್ರಿ ಅವರು ಮದುವೆಯಾಗಬೇಕಿತ್ತು.
ಆದರೆ, ಮದುವೆಗೆ ಕೇವಲ ಒಂದು ಗಂಟೆ ಮೊದಲು ಸೀರೆ ಮತ್ತು ಹಣದ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೋಪದ ಭರದಲ್ಲಿ ಸಾಜನ್, ಸೋನಿಗೆ ಕಬ್ಬಿಣದ ಪೈಪ್‌ನಿಂದ ಹೊಡೆದು, ಆಕೆಯ ತಲೆಯನ್ನು ಗೋಡೆಗೆ ಹೊಡೆದಿದ್ದಾನೆ. ಪರಿಣಾಮವಾಗಿ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ನಂತರ ಆರೋಪಿ ಮನೆಯನ್ನು ಧ್ವಂಸ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ. ಮಾಹಿತಿ ಪಡೆದ ಪೊಲೀಸ್ ತಂಡವು ಪರಿಸ್ಥಿತಿಯನ್ನು ಅವಲೋಕಿಸಲು ಸ್ಥಳಕ್ಕೆ ಧಾವಿಸಿತು.
ಕುಟುಂಬದವರ ವಿರೋಧದ ನಡುವೆಯೂ ದಂಪತಿಗಳು ಒಟ್ಟಿಗೆ ವಾಸಿಸುತ್ತಿದ್ದರು. ಅವರು ಒಂದೂವರೆ ವರ್ಷಗಳಿಂದ ಲಿವಿಂಗ್ ಟುಗೆದರ್‌ನಲ್ಲಿ ವಾಸಿಸುತ್ತಿದ್ದರು. ಮದುವೆ ದಿನ ಸೀರೆ ಮತ್ತು ಹಣದ ವಿಚಾರದಲ್ಲಿ ಇಬ್ಬರ ನಡುವೆ ಜಗಳವಾಗಿತ್ತು ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಆರ್.ಆರ್. ಸಿಂಘಾಲ್ ಹೇಳಿದ್ದಾರೆ. ಜಗಳದ ಸಮಯದಲ್ಲಿ ಸಾಜನ್, ಸೋನಿಗೆ ಕಬ್ಬಿಣದ ಪೈಪ್‌ನಿಂದ ಹೊಡೆದನು. ಅವನು ಆಕೆಯ ತಲೆಯನ್ನು ಗೋಡೆಗೆ ಹೊಡೆದನು. ಇದರಿಂದಾಗಿ ಅವಳು ಸ್ಥಳದಲ್ಲೇ ಸಾವನ್ನಪ್ಪಿದಳು. ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವಿವರವಾದ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಕೊಲೆಗೆ ಸಂಬಂಧಿಸಿದಂತೆ ಪ್ರತ್ಯೇಕ ದೂರು ಕೂಡ ದಾಖಲಾಗಿದೆ.
ಇದನ್ನೂ ಓದಿ: ಹಾವೇರಿ | ಯುವತಿಯ ಲ್ಯಾಪ್ಟಾಪ್ ಹಿಂತಿರುಗಿಸಿದ ಕೆಎಸ್ಆರ್ಟಿಸಿ ಸಿಬ್ಬಂದಿ



















