ಬೆಂಗಳೂರು: ಶಾಲೆಯಲ್ಲಿ (School) ನಡೆಯುತ್ತಿದ್ದ ಖೋ ಖೋ ಪಂದ್ಯಾಟದ (Kho Kho Tournament) ಸಂದರ್ಭದಲ್ಲಿಯೇ ಪುಂಡರು ನಶೆ ಏರಿಸಿಕೊಂಡು ಕೈಯಲ್ಲಿ ಡ್ರ್ಯಾಗರ್ ಹಿಡಿದು ಅಟ್ಟಹಾಸ ಮೆರೆದಿರುವ ಘಟನೆಯೊಂದು ನಡೆದಿದೆ.
ಈ ಘಟನೆ ಕೊತ್ತನೂರು ಹತ್ತಿರ ನಡೆದಿದೆ. ಮಂಗಳವಾರ ಸೊಣ್ಣಪ್ಪನಹಳ್ಳಿ ಶಿವಾಲಯ ಸರ್ಕಾರಿ ಪ್ರೌಢಶಾಲೆಯಲ್ಲಿ ಅಂತರ್ ಶಾಲಾ ಖೋ ಖೋ ಪಂದ್ಯಾಟ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ತೀರ್ಪುಗಾರ ತಪ್ಪು ತೀರ್ಪು ನೀಡಿದ್ದಾರೆ ಎಂದು ಆರೋಪಿಸಿ ಸೊಣ್ಣಪ್ಪನಹಳ್ಳಿ ಹುಡುಗರು ಗಲಾಟೆ ಮಾಡಿದ್ದಾರೆ.
ಆಗ ಪವನ್ , ಸುದೀಪ್ ಹಾಗೂ ಇತರರು ಏಕಾಏಕಿ ತೀರ್ಪುಗಾರರ ಮೇಲೆ ಮುಗಿಬಿದಿದ್ದಾರೆ. ಪಂದ್ಯದ ಸಂದರ್ಭದಲ್ಲಿ ಇವೆಲ್ಲ ಮಾಮೂಲಿ ಎಂದು ಆಯೋಜಕರು ಸುಮ್ಮನಾಗಿದ್ದರು. ಗಲಾಟೆ ಜಾಸ್ತಿ ಆಗುತ್ತಿದ್ದಂತೆ ಚಾಕು, ಡ್ರ್ಯಾಗರ್, ವಿಕೆಟ್ ಗಳು ಹೊರಬಿದ್ದಿವೆ. ಶಾಲಾ ಮಕ್ಕಳ ಮುಂದೆಯೇ ಆಯುಧ ಪ್ರದರ್ಶಿಸಿ ಮಕ್ಕಳನ್ನೂ ಭಯಕ್ಕೆ ದೂಡಿದ್ದಾರೆ.
ಆಗ ಶಬ್ಬೀರ್ ಪುಂಡರ ಹತ್ತಿರ ಗಲಾಟೆ ಮಾಡದಂತೆ ಮನವಿ ಮಾಡಿದ್ದ. ಗಾಂಜಾ ಕಿಕ್ ನಲ್ಲಿದ್ದ ಯುವಕರು ಶಬ್ಬೀರ್ ತಲೆಗೆ ಚಾಕವಿನಿಂದ ಗುದ್ದಿ, ಹಲ್ಲೆ ನಡೆಸಿ ಮೊಬೈಲ್ ಪುಡಿ ಪುಡಿ ಮಾಡಿದ್ದಾರೆ. ಸದ್ಯ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.