ಬೆಂಗಳೂರು: ಹೆಣ್ಣು ಬೆಕ್ಕೊಂದು ಮರಿ ಹಾಕಿದ್ದಕ್ಕೆ ಅಕ್ಕಪಕ್ಕದ ಮನೆಯವರ ನಡುವೆ ಜಗಳ ಮಾಡಿರುವ ಘಟನೆ ಬೆಂಗಳೂರಿನ ಶೇಷಾದ್ರಿಪುರಂನಲ್ಲಿ ನಡೆದಿದೆ.
ಮಾಹಿತಿಯ ಪ್ರಕಾರ, ಹೆಣ್ಣು ಬೆಕ್ಕು ನಾಲ್ಕು ಮರಿಗಳಿಗೆ ಜನ್ಮ ನೀಡಿದ್ದರಿಂದ ಆರಂಭವಾದ ವಿಚಾರವು ನಂತರ ಗಂಡು ಬೆಕ್ಕಿನ ಮಾಲೀಕರಿಗೆ ಸಂಬಂಧಿಸಿ ವಾಗ್ವಾದಕ್ಕೆ ತಿರುಗಿದೆ. ಹೆಣ್ಣು ಬೆಕ್ಕಿನ ಮಾಲೀಕರು ಗಂಡು ಬೆಕ್ಕಿನ ಮಾಲೀಕರಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.
ಘಟನೆಯ ಸಮಯದಲ್ಲಿ ಮರಿಗಳ ವಿಚಾರ ಹೆಚ್ಚಾಗಿ ತೀವ್ರಗೊಂಡು, ಒಬ್ಬರು ಗಂಡು ಬೆಕ್ಕಿನ ಮನೆಯ ಬಳಿ ಒಂದು ಮರಿಯನ್ನು ಬಿಟ್ಟು ಕ್ಯಾತೆ ತೆಗೆದಿದ್ದಾರೆ ಎಂಬುದೂ ತಿಳಿದುಬಂದಿದೆ. ಇದರಿಂದ ಪರಿಸ್ಥಿತಿ ಇನ್ನಷ್ಟು ಉದ್ವಿಗ್ನಗೊಂಡಿದ್ದು, ಎರಡೂ ಮನೆಯವರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ.
ಜಗಳ ತೀವ್ರವಾದ ಹಿನ್ನೆಲೆಯಲ್ಲಿ ಗಂಡು ಬೆಕ್ಕಿನ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ನಂತರ ಸ್ಥಳಕ್ಕೆ ಆಗಮಿಸಿದ ಶೇಷಾದ್ರಿಪುರಂ ಪೊಲೀಸ್ ಠಾಣೆ ಪೊಲೀಸರು ಮಧ್ಯಸ್ಥಿಕೆ ವಹಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಿದ್ದಾರೆ.
ಇದನ್ನೂ ಓದಿ : ಹೆಂಡತಿಯನ್ನು ನೋಡಿ ಬೊಗಳಿದ್ದಕ್ಕೆ ನಾಯಿಗೆ ದೊಣ್ಣೆಯಿಂದ ಥಳಿಸಿದ ವ್ಯಕ್ತಿ!


















