ಟೋಕಿಯೋ: ಜಪಾನ್ ಇತ್ತೀಚೆಗೆ ಭೂಕಂಪಗಳ ಸರಣಿಗೆ ಸಾಕ್ಷಿಯಾಗುತ್ತಿದ್ದು, ದೇಶದ ಮುಖ್ಯ ದ್ವೀಪಗಳ ನೈಋತ್ಯ ಭಾಗದಲ್ಲಿ ಶನಿವಾರ 5.4 ತೀವ್ರತೆಯ ಮತ್ತೊಂದು ಕಂಪನ ಸಂಭವಿಸಿವೆ. ಇಲ್ಲಿ ಹೆಚ್ಚಿನ ಭೂಕಂಪಗಳ ಸಾಧ್ಯತೆಯ ಬಗ್ಗೆ ಸರ್ಕಾರ ಎಚ್ಚರಿಕೆ ನೀಡಿದೆ.
ಕಳೆದ ಕೆಲವು ದಿನಗಳಲ್ಲಿ ಈ ಪ್ರದೇಶದಲ್ಲಿ 1,000ಕ್ಕೂ ಹೆಚ್ಚು ಕಂಪನಗಳು ಸಂಭವಿಸಿವೆ.
ಗುರುವಾರ ಸಂಭವಿಸಿದ ಪ್ರಬಲ ಭೂಕಂಪದ ನಂತರ, ಜಪಾನ್‌ನ ದಕ್ಷಿಣದಲ್ಲಿರುವ ಚಿಕ್ಕ ದ್ವೀಪವಾದ ಅಕುಸೆಕಿ ದ್ವೀಪದ 89 ನಿವಾಸಿಗಳನ್ನು ಸ್ಥಳಾಂತರಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಈ ಸರಣಿ ಭೂಕಂಪಗಳು ಈಗಾಗಲೇ ನಿವಾಸಿಗಳಲ್ಲಿ ಆತಂಕ ಮೂಡಿಸಿವೆ. ಇದರ ಜೊತೆಗೆ, ಸಾಮಾಜಿಕ ಮಾಧ್ಯಮಗಳಲ್ಲಿ 1999ರ ಕಾಮಿಕ್ ಪುಸ್ತಕವೊಂದರ ಬಗ್ಗೆ ವದಂತಿಗಳು ಹರಡಲು ಶುರುವಾಗಿವೆ.
ಭೂಕಂಪಗಳು ಮತ್ತು ಮಂಗಾ ಸಂಪರ್ಕ:
ಸ್ವಯಂ ಘೋಷಿತ ಅತೀಂದ್ರಿಯ ಶಕ್ತಿ ಹೊಂದಿರುವ ರಿಯೋ ಟಟ್ಸುಕಿ ಬರೆದ “ದಿ ಫ್ಯೂಚರ್ ಐ ಸಾ” (The Future I Saw) ಎಂಬ ಕಾಮಿಕ್ ಪುಸ್ತಕದಲ್ಲಿ ಆಕೆ ತನ್ನ ಕನಸುಗಳ ಆಧಾರದ ಮೇಲೆ ಭವಿಷ್ಯವಾಣಿಯನ್ನು ಬರೆದಿದ್ದಾರೆ. ಈ ಭವಿಷ್ಯವಾಣಿಯಲ್ಲಿ ಹಲವು ವಿಚಾರಗಳು ಈಗಾಗಲೇ ನಿಜವಾಗಿವೆ ಎಂದು ಅನೇಕರು ಹೇಳಿಕೊಂಡಿದ್ದಾರೆ. 2011ರ ಟೋಹೊಕು ಭೂಕಂಪ ಮತ್ತು ಫುಕುಶಿಮಾ ನಾಶಕ್ಕೆ ಕಾರಣವಾದ ಸುನಾಮಿಯನ್ನು ಈ ಯುವತಿ ಮೊದಲೇ ಊಹಿಸಿ, ಭವಿಷ್ಯ ನುಡಿದಿದ್ದರು ಎಂದು ಹೇಳಲಾಗಿದೆ.

ತನ್ನ ಕಾಮಿಕ್ ಪುಸ್ತಕದಲ್ಲಿ, ರಿಯೋ ಟಟ್ಸುಕಿ 2011ರ ಮಾರ್ಚ್ 11 ರಂದು ದೊಡ್ಡ ವಿಪತ್ತು ಸಂಭವಿಸುತ್ತದೆ ಎಂದು ಉಲ್ಲೇಖಿಸಿದ್ದರು. ಅದರಂತೆಯೇ 2011ರ ನಿಖರ ದಿನಾಂಕದಂದೇ ಭೀಕರ ಭೂಂಕಪಕ್ಕೆ ಜಪಾನ್ ತುತ್ತಾಗಿತ್ತು.
ಈಗ, ದಕ್ಷಿಣ ಜಪಾನ್‌ನಲ್ಲಿನ ಇತ್ತೀಚಿನ ಕಂಪನಗಳ ನಡುವೆ, ಸಾಮಾಜಿಕ ಮಾಧ್ಯಮ ಬಳಕೆದಾರರು ಆ ಕಾಮಿಕ್ ಬಗ್ಗೆ ಮತ್ತೆ ಆಸಕ್ತಿ ತೋರಿಸುತ್ತಿದ್ದಾರೆ. ಭವಿಷ್ಯದ ಭೂಕಂಪಗಳ ಬಗ್ಗೆ ಸುಳಿವುಗಳು ಅಥವಾ ಸಂಭಾವ್ಯ ಭವಿಷ್ಯವಾಣಿಗಳನ್ನು ಹುಡುಕುತ್ತಿದ್ದಾರೆ. 2025ರ ಸುಮಾರಿಗೆ ಭೂಕಂಪಗಳ ಚಟುವಟಿಕೆ ಹೆಚ್ಚಾಗುತ್ತದೆ ಎಂದು ಆ ಕಾಮಿಕ್ ಪುಸ್ತಕ ಎಚ್ಚರಿಸುತ್ತದೆ ಎಂದು ಕೆಲವರು ಹೇಳಿಕೊಂಡಿದ್ದಾರೆ. ಇದು ಜಪಾನ್‌ನ ಪ್ರಸ್ತುತ ಭೂಕಂಪಗಳ ಸಮೂಹದ ಬಗ್ಗೆ ಸಾರ್ವಜನಿಕ ಗಮನವನ್ನು ಮತ್ತಷ್ಟು ಹೆಚ್ಚಿಸಿದೆ.
ವದಂತಿಗಳನ್ನು ನಂಬದಂತೆ ಅಧಿಕಾರಿಗಳ ಮನವಿ:
ಪುಸ್ತಕ ಮತ್ತು ಭವಿಷ್ಯವಾಣಿಗಳ ಬಗ್ಗೆ ಹರಡಿರುವ ವದಂತಿಗಳ ನಡುವೆ, ಜಪಾನ್ ಸರ್ಕಾರವು ಸಾರ್ವಜನಿಕರಿಗೆ ಯಾವುದೇ ಆಧಾರರಹಿತ ವಿಪತ್ತು ಭವಿಷ್ಯವಾಣಿಗಳನ್ನು ನಂಬದಂತೆ ಮನವಿ ಮಾಡಿದೆ.
ಜಪಾನ್ ಹವಾಮಾನ ಸಂಸ್ಥೆಯ ಭೂಕಂಪ ಮತ್ತು ಸುನಾಮಿ ಮೇಲ್ವಿಚಾರಣಾ ವಿಭಾಗದ ನಿರ್ದೇಶಕ ಅಯತಕಾ ಎಬಿಟಾ, “ನಮ್ಮ ಪ್ರಸ್ತುತ ವೈಜ್ಞಾನಿಕ ಜ್ಞಾನದೊಂದಿಗೆ, ಭೂಕಂಪದ ನಿಖರ ಸಮಯ, ಸ್ಥಳ ಅಥವಾ ಪ್ರಮಾಣವನ್ನು ಊಹಿಸುವುದು ಕಷ್ಟ” ಎಂದು ಹೇಳಿದ್ದಾರೆ. “ಜನರು ವೈಜ್ಞಾನಿಕ ಪುರಾವೆಗಳ ಆಧಾರದ ಮೇಲೆ ತಮ್ಮ ತಿಳುವಳಿಕೆಯನ್ನು ರೂಪಿಸಿಕೊಳ್ಳಬೇಕು ಎಂದು ನಾವು ವಿನಂತಿಸುತ್ತೇವೆ” ಎಂದು ಎಬಿಟಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.