ಚೆನ್ನೈ : ತಮಿಳುನಾಡು ಸೋಮವಾರ (ಏ.6) ಅಪರೂಪದ ತೀರ್ಪೊಂದಕ್ಕೆ ಸಾಕ್ಷಿಯಾಗಿದ್ದು, ತಂದೆ-ಮಗನ ಲಾಕಪ್ ಡೆತ್ ಪ್ರಕರಣದ ಆರೋಪಿಗಳಾದ 9 ಪೊಲೀಸ್ ಅಧಿಕಾರಿಗಳಿಗೆ ಮಧುರೈ ನ್ಯಾಯಾಲಯ ಮರಣದಂಡನೆ ಶಿಕ್ಷೆ ಪ್ರಕಟಿಸಿದೆ.
2020ರಲ್ಲಿ ಶಾಂತಕುಲಂ ಜೈಲಿನಲ್ಲಿ ಮೃತಪಟ್ಟ ಜಯರಾಜ್ ಮತ್ತು ಬೆನ್ನಿಕ್ಸ್ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಈ ತೀರ್ಪು ನೀಡಿದೆ. ಇಷ್ಟೊಂದು ಪೊಲೀಸ್ ಅಧಿಕಾರಿಗಳಿಗೆ ಏಕಕಾಲಕ್ಕೆ ಮರಣ ದಂಡನೆ ಶಿಕ್ಷೆ ಪ್ರಕಟವಾಗಿರುವ ಅಪರೂಪದ ತೀರ್ಪು ಇದಾಗಿದ್ದು, ಸದ್ಯ ದೇಶದ ಗಮನ ಸೆಳೆದಿದೆ.

2020ರ ಜೂನ್ 19ರಂದು ಮೊಬೈಲ್ ಅಂಗಡಿ ನಡೆಸುತ್ತಿದ್ದ ಜಯರಾಜ್ ಮತ್ತು ಬೆನಿಕ್ಸ್ ಅವರನ್ನು ಲಾಕ್ಡೌನ್ ಸಮಯದಲ್ಲಿ ಅನುಮತಿ ನೀಡಿದ ಅವಧಿಗಿಂತಲೂ 45 ನಿಮಿಷ ಹೆಚ್ಚು ಸಮಯ ಅಂಗಡಿ ತೆರೆದಿದ್ದಕ್ಕೆ ಪೊಲೀಸರು ಬಂಧಿಸಿದ್ದರು. ನಂತರ ಇಬ್ಬರನ್ನೂ ಸಾಥನ್ಕುಲಂ ಪೊಲೀಸ್ ಠಾಣೆಗೆ ಕರೆತಂದು ರಾತ್ರಿಯಿಡೀ ಹಲ್ಲೆ ಮಾಡಿದ್ದರು. ಅಲ್ಲದೇ ತಮ್ಮ ರಕ್ತವನ್ನು ತಮ್ಮದೇ ಬಟ್ಟೆಗಳಿಂದ ನೆಲದಿಂದ ಒರೆಸುವಂತೆ ಒತ್ತಾಯಿಸಲಾಗಿತ್ತು.
ಬಳಿಕ ಇಬ್ಬರನ್ನೂ ಜಡ್ಜ್ ಮುಂದೆ ಹಾಜರು ಪಡಿಸಲಾಗಿತ್ತು. ಆಗ ಕೋವಿಡ್ ಸಮಯ ಆಗಿದ್ದರಿಂದ ನ್ಯಾಯಾಧೀಶರಿಗೆ ಅವರ ಮೇಲಿನ ಹಲ್ಲೆ ನಡೆದಿದ್ದನ್ನು ಪರಿಶೀಲಿಸಲು ಸಾಧ್ಯವಾಗಿರಲಿಲ್ಲ. ಬಳಿಕ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಯಿತು. ಇದಾದ ಮೂರು ದಿನಗಳಲ್ಲಿ ಇಬ್ಬರೂ ಸಾವನ್ನಪ್ಪಿದ್ದರು. ಜಯರಾಜ್ಗೆ 17 ಗಾಯಗಳಾಗಿದ್ದವು. ಬೆನ್ನಿಕ್ಸ್ಗೆ 13 ಗಾಯಗಳಾಗಿದ್ದವು. ಗುದನಾಳದ ರಕ್ತಸ್ರಾವ ಸೇರಿದಂತೆ, ಮೈಮೇಲೆಲ್ಲ ಗಾಯಗಳಿದ್ದವು. ಅವರ ಸಾವು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು.
ಮದ್ರಾಸ್ ಹೈಕೋರ್ಟ್ನ ನಿರ್ದೇಶನದಂತೆ ಪ್ರಕರಣದ ತನಿಖೆ ಆರಂಭಿಸಿದ್ದ ಸಿಬಿಐ, 9 ಪೊಲೀಸರನ್ನು ಬಂಧಿಸಿತ್ತು. ಬಂಧಿತರಲ್ಲಿ ಒಬ್ಬ ಇನ್ಸ್ಪೆಕ್ಟರ್, ಇಬ್ಬರು ಸಬ್-ಇನ್ಸ್ಪೆಕ್ಟರ್ಗಳು, ಉಳಿದಂತೆ ಕಾನ್ಸ್ಟೆಬಲ್ಗಳು ಸೇರಿದ್ದಾರೆ. ಅವರ ವಿರುದ್ಧ ಕೊಲೆ ಆರೋಪ ಹೊರಿಸಲಾಗಿತ್ತು.
ತನಿಖೆಯ ಸಮಯದಲ್ಲಿ, ಮಹಿಳಾ ಕಾನ್ಸ್ಟೆಬಲ್ ಒಬ್ಬರು ತಂದೆ ಮತ್ತು ಮಗನ ಮೇಲೆ ರಾತ್ರೋರಾತ್ರಿ ಹಲ್ಲೆ ನಡೆಸಿದ್ದನ್ನು ಸಿಬಿಐ ಅಧಿಕಾರಿಗಳಿಗೆ ತಿಳಿಸಿದ್ದರು. ಠಾಣೆಯಲ್ಲಿ ಟೇಬಲ್ಗಳು ಮತ್ತು ಲಾಠಿಗಳಲ್ಲಿ ರಕ್ತದ ಕಲೆಗಳಿವೆ ಎಂದು ತೋರಿಸಿದ್ದರು. ಇದು ಪ್ರಕರಣದ ಪ್ರಮುಖ ಸಾಕ್ಷಿಯಾಗಿತ್ತು. ಅಲ್ಲದೇ ಸಿಸಿಟಿವಿಯಲ್ಲಿ ಸ್ವಯಂಚಾಲಿತವಾಗಿ ವಿಡಿಯೋ ಡಿಲೀಟ್ ಆಗಿದ್ದವು. ಇದರಿಂದ ಅಧಿಕಾರಿಗಳು ಕೆಲವು ಸವಾಲನ್ನು ಎದುರಿಸಿ ಪ್ರಕರಣವನ್ನು ಕೂಲಂಕುಷವಾಗಿ ತನಿಖೆ ನಡೆಸಿದ್ದರು.
ಇದನ್ನೂ ಓದಿ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 12 ಹುದ್ದೆಗಳ ನೇಮಕಾತಿ.. 1.10 ಲಕ್ಷ ರೂ. ಸಂಬಳ!


















