ಮುಂಬೈ: ಮಹಾರಾಷ್ಟ್ರದ ಪುಣೆಯಲ್ಲಿ ವ್ಯಕ್ತಿಯೊಬ್ಬ ಪತ್ನಿಯ ಶೀಲ ಶಂಕಿಸಿ ಮೂರುವರೆ ವರ್ಷದ ಮಗನ ಕತ್ತು ಸೀಳಿ ಕೊಲೆ ಮಾಡಿದ್ದಾನೆ. 38 ವರ್ಷದ ಮಾಧವ್ ತಿಕೇಟಿ ಎಂಬ ವ್ಯಕ್ತಿಯೇ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಮೂರುವರೆ ವರ್ಷದ ಮಗುವಿನ ಶವವು ಪುಣೆ ಹೊರವಲಯದ ನಿರ್ಜನ ಪ್ರದೇಶದಲ್ಲಿ ದೊರೆತಿದೆ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಐಟಿ ಎಂಜಿನಿಯರ್ ಆಗಿರುವ ಮಾಧವ್ ತಿಕೇಟಿಯು ಕಳೆದ ಎರಡು ತಿಂಗಳಿಂದ ನಿರುದ್ಯೋಗಿಯಾಗಿದ್ದ. ಮನೆಯಲ್ಲೇ ಇರುತ್ತಿದ್ದ ಆತ, ಪತ್ನಿಯ ಶೀಲದ ಬಗ್ಗೆ ಅನುಮಾನಪಟ್ಟಿದ್ದಾನೆ. ಮೂರುವರೆ ವರ್ಷದ ಬಾಲಕನು ಬೇರೆಯವರಿಗೆ ಜನಿಸಿದ್ದಾನೆ ಎಂಬ ಶಂಕೆ ಆತನನ್ನು ಕಾಡುತ್ತಿತ್ತು. ಇದೇ ಕಾರಣಕ್ಕೆ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ, ಕತ್ತು ಸೀಳಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕೊಲೆ ಪತ್ತೆಹಚ್ಚಿದ್ದು ಹೇಗೆ?
ಶುಕ್ರವಾರ ತಂದೆ ಹಾಗೂ ಮಗ ಕಾಣೆಯಾದ ಕಾರಣ ಮಹಿಳೆಯು ಚಂದನ್ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದಾದ ಬಳಿಕ ತನಿಖೆ ಆರಂಭಿಸಿದ ಪೊಲೀಸರು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದಾರೆ. ಲೋಹ್ ಗಾಂವ್, ವಡ್ಗಾಂವ್ ಶೇರಿ ಹಾಗೂ ಹದಪ್ಸರ್ ಪ್ರದೇಶಗಳಲ್ಲಿ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಮಧ್ಯಾಹ್ನ 2.30ರ ಸುಮಾರಿಗೆ ತಂದೆ ಹಾಗೂ ಮಗ ಕೈ ಹಿಡಿದುಕೊಂಡು ರಸ್ತೆಯಲ್ಲಿ ನಡೆದುಕೊಂಡು ಹೋಗುವ ದೃಶ್ಯಗಳು ಪೊಲೀಸರಿಗೆ ಲಭ್ಯವಾಗಿವೆ.
ಸಿಸಿಟಿವಿ ದೃಶ್ಯಗಳನ್ನೇ ಪರಿಶೀಲಿಸುತ್ತ ಹೋದ ಪೊಲೀಸರಿಗೆ, ಸಂಜೆ 5.30ರ ಸುಮಾರಿಗೆ ಮಾಧವ್ ಒಬ್ಬನೇ ತಿರುಗಾಡುತ್ತಿರುವ ದೃಶ್ಯಗಳು ಲಭ್ಯವಾಗಿವೆ. ಇದರಿಂದಾಗಿ ಪೊಲೀಸರಿಗೆ ಮಾಧವ್ ಮೇಲೆಯೇ ಅನುಮಾನ ಬಂದಿದೆ. ಮೊಬೈಲ್ ಟ್ರ್ಯಾಕಿಂಗ್ ಬಳಸಿದ ಪೊಲೀಸರು, ಲಾಡ್ಜ್ ಒಂದರಲ್ಲಿ ಮಾಧವ್ ನನ್ನು ಬಂಧಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಪತ್ನಿಯ ಶೀಲ ಶಂಕಿಸಿ ಮಗನನ್ನು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.