ಬೆಳಗಾವಿ: ತಂದೆಯೋರ್ವ ಮದುವೆ ಸಂಭ್ರಮದಲ್ಲಿದ್ದ ಮಗನನ್ನೇ ಕೊಲೆ ಮಾಡಿರುವ ಘಟನೆ ನಡೆದಿದೆ.
ಜಿಲ್ಲೆಯ ಕಿತ್ತೂರು (Kitturu) ತಾಲೂಕಿನ ಚಿಕ್ಕನಂದಿಹಳ್ಳಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಮಂಜುನಾಥ್ ಉಳ್ಳಾಗಡ್ಡಿ(25) ಕೊಲೆಯಾಗಿರುವ ಮಗ. ಮಂಜುನಾಥನ ಮದುವೆ ಮಾರ್ಚ್ 12ರಂದು ನಿಗದಿಯಾಗಿತ್ತು. ಆದರೆ, ಕ್ಷುಲ್ಲಕ ಕಾರಣಕ್ಕೆ ಆತನ ತಂದೆ ಹಾಗೂ ಸಹೋದರ ಸೇರಿ ಹತ್ಯೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಮಂಜುನಾಥ್ ನ ಮದುವೆ ಇರುವ ಹಿನ್ನೆಲೆಯಲ್ಲಿ ಸೇನೆಯಲ್ಲಿದ್ದ ಸಹೋದರ ಕೂಡ ಊರಿಗೆ ಬಂದಿದ್ದ. ಮದುವೆಯಾಗಬೇಕಿದ್ದ ಮಂಜುನಾಥ್ ಮಾರ್ಚ್ 8ರಂದು ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡಿದ್ದಾನೆ. ಮದುವೆಯ ಸಿದ್ಧತೆ ಮಾಡಿಕೊಳ್ಳುತ್ತಿದ್ದ ಕುಟುಂಬಸ್ಥರಿಗೆ ಇದು ಸರಿ ಕಾಣಿಸಿಲ್ಲ. ಹೀಗಾಗಿ ಬುದ್ಧಿ ಹೇಳಿದ್ದಾರೆ. ಇದು ವಿಕೋಪಕ್ಕೆ ತೆರಳಿ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಜಗಳ ವಿಕೋಪಕ್ಕೆ ತಿರುಗುತ್ತಿದ್ದಂತೆ ತಂದೆ ನಾಗಪ್ಪ, ಗುರುಬಸಪ್ಪ ಸೇರಿಕೊಂಡು ಕಲ್ಲು ಮತ್ತು ಇಟ್ಟಿಗೆಯಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.