ಗದಗ: ಮನೆ ಮುಂದೆ ಹಾರ್ನ್ ಹೊಡೆದ ಕ್ಷುಲ್ಲಕ ಕಾರಣಕ್ಕೆ ಎರಡು ಕುಟುಂಬಗಳ ನಡುವೆ ಭೀಕರ ಜಗಳ ಉಂಟಾಗಿ ತಂದೆ–ಮಗನನಿಗೆ ಚಾಕುವಿನಿಂದ ಇರಿದ ಘಟನೆ ಗದಗ ತಾಲೂಕಿನ ಅಡವಿ ಸೋಮಾಪುರ ಗ್ರಾಮದಲ್ಲಿ ನಡೆದಿದೆ.
ಕಂಬಳಿ ಕುಟುಂಬ ಮತ್ತು ಚಕ್ರಣ್ಣವರ ಕುಟುಂಬದ ನಡುವೆ ನಡೆದ ಗಲಾಟೆಯಲ್ಲಿ ಶರಣಬಸಪ್ಪ ಕಂಬಳಿ(17) ಹಾಗೂ ಅವರ ತಂದೆ ಹೂವಪ್ಪ ಕಂಬಳಿ (45) ಗಂಭೀರವಾಗಿ ಗಾಯಗೊಂಡಿದ್ದಾರೆ. ಜಗಳ ಬಿಡಿಸಲು ಹೋದ ಸಹೋದರ ಮಲ್ಲಪ್ಪ ಕಂಬಳಿ ಮೇಲೂ ಹಲ್ಲೆ ನಡೆಸಲಾಗಿದೆ. ಚಕ್ರಣ್ಣವರ ಕುಟುಂಬದ ಈರಪ್ಪ, ಚಿನ್ನಪ್ಪ, ದೊಡ್ಡ ಯಲ್ಲಪ್ಪ ಹಾಗೂ ರಮೇಶ್ ಎಂಬವರು ಚಾಕು ಮತ್ತು ಕಬ್ಬಿಣದ ರಾಡ್‌ನಿಂದ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಪ್ರತಿಯಾಗಿ ಇನ್ನೊಂದು ಗುಂಪಿನ ಈರವ್ವ ಹಾಗೂ ದೊಡ್ಡ ಯಲ್ಲಪ್ಪನಿಗೂ ಗಾಯಗಳಾಗಿವೆ. ಎರಡು ಕುಟುಂಬಗಳ ನಡುವೆ ಹಿಂದಿನಿಂದಲೂ ವೈಷಮ್ಯವಿದ್ದು, ಈ ಹಿಂದೆ ಗ್ರಾಮದ ಹಿರಿಯರು ರಾಜಿ ಪಂಚಾಯಿತಿ ನಡೆಸಿದ್ದರು ಎನ್ನಲಾಗಿದೆ. ನಿನ್ನೆ ರಾತ್ರಿ ನಡೆದ ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡವರನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಈ ಘಟನಾ ಸಂಬಂಧ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಶಬರಿಮಲೆ ಚಿನ್ನ ಕಳ್ಳತನ ಪ್ರಕರಣ | ಬೆಂಗಳೂರು, ಬಳ್ಳಾರಿ ಸೇರಿ ಹಲವೆಡೆ ED ದಾಳಿ!



















