ಶಿವಮೊಗ್ಗ: ಓಮ್ನಿ ಕಾರು ಹಾಗೂ ಪಿಕಪ್ ವಾಹನಗಳ ಮಧ್ಯೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.

ಈ ಘಟನೆ ಸಾಗರ ತಾಲೂಕಿನ ತಾಳಗುಪ್ಪ ಹೋಬಳಿಯ ಬಾಳೆಗಾರು ಹತ್ತಿರ ನಡೆದಿದೆ. ಶನಿವಾರ ರಾತ್ರಿ ವೇಳೆ ಈ ಘಟನೆ ನಡೆದಿದೆ. ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದರೆ, ಮತ್ತೋರ್ವ ವ್ಯಕ್ತಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ಓಮ್ನಿಯಲ್ಲಿದ್ದವರು ಎನ್ ಆರ್ ಪುರ ನಿವಾಸಿಗಳು ಎನ್ನಲಾಗಿದೆ.
ಓಮ್ನಿ ಜೋಗ ಜಲಪಾತದಿಂದ ಬರುತ್ತಿದ್ದ ವೇಳೆ ಸಾಗರಿಂದ ಬರುತ್ತಿದ್ದ ಪಿಕಪ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ. ಶೇಖರ್ (56), ಸಂಚಿತ್ ರಾಜ್(30) ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಮಧುರ(35), ಕಮಲ(57), ಮಾನಸ(32), ಸಿರಿಜ(49), ಭಾವನಾ(26) ಹಾಗೂ ಎರಡು ವರ್ಷದ ಬಾಲಕ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.