ಚೆನ್ನೈ : ತಮಿಳುನಾಡಿನ ತೆನ್ಕಾಸಿ ಜಿಲ್ಲೆಯಲ್ಲಿ ಸೋಮವಾರ ಬೆಳಿಗ್ಗೆ ಎರಡು ಖಾಸಗಿ ಬಸ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ, 6 ಮಂದಿ ಸಾವನ್ನಪ್ಪಿ, 28 ಮಂದಿ ಗಾಯಗೊಂಡಿದ್ದಾರೆ. ಅಚ್ಚಂಪಟ್ಟಿ ಸಮೀಪದ ತೆನ್ಕಾಸಿ-ಮದುರೈ ರಸ್ತೆಯಲ್ಲಿ ಈ ದುರಂತ ಸಂಭವಿಸಿದೆ.
ಗಾಯಗೊಂಡವರ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿದ್ದು, ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಮದುರೈಯಿಂದ ಸೆಂಕೊಟ್ಟೈ ಕಡೆಗೆ ಸಾಗುತ್ತಿದ್ದ ಖಾಸಗಿ ಬಸ್ ಮತ್ತು ತೆನ್ಕಾಸಿಯಿಂದ ಕೋವಿಲ್‌ಪಟ್ಟಿ ಕಡೆಗೆ ಸಾಗುತ್ತಿದ್ದ ಮತ್ತೊಂದು ಬಸ್ ಮುಖಾಮುಖಿ ಡಿಕ್ಕಿಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿಕ್ಕಿಯ ತೀವ್ರತೆ ಎಷ್ಟಿತ್ತೆಂದರೆ ಎರಡೂ ವಾಹನಗಳ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಒಂದು ಬಸ್‌ನ ಮುಂಭಾಗ ಸಂಪೂರ್ಣವಾಗಿ ನಾಶವಾಗಿದೆ. ಅಪಘಾತದ ಸ್ಥಳದಲ್ಲಿ ರಸ್ತೆಯಲ್ಲೆಲ್ಲ ಒಡೆದ ಗಾಜಿನ ತುಂಡುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ದೃಶ್ಯಗಳಲ್ಲಿ ಕಂಡುಬಂದಿವೆ.
ಈ ಕುರಿತು ಮಾತನಾಡಿದ ಹಿರಿಯ ಪೊಲೀಸ್ ಅಧಿಕಾರಿ, ಮದುರೈಯಿಂದ ಸೆಂಕೊಟ್ಟೈ ಕಡೆಗೆ ಸಾಗುತ್ತಿದ್ದ ಬಸ್ ಚಾಲಕ ಅತ್ಯಂತ ವೇಗ ಮತ್ತು ನಿರ್ಲಕ್ಷ್ಯದಿಂದ ಚಾಲನೆ ಮಾಡುತ್ತಿದ್ದ ಎಂಬುದು ಆರಂಭಿಕ ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ತಿಳಿಸಿದ್ದಾರೆ.

ಅಪಘಾತದ ಬಗ್ಗೆ ಮಾಹಿತಿ ಬಂದ ತಕ್ಷಣ ಸ್ಥಳೀಯ ಅಧಿಕಾರಿಗಳು ಮತ್ತು ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ. ಈ ದುರಂತದಲ್ಲಿ 5 ಮಹಿಳೆಯರು ಮತ್ತು ಒಬ್ಬ ಪುರುಷ ಸೇರಿ ಒಟ್ಟು 6 ಮಂದಿ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ವರದಿಗಳು ತಿಳಿಸಿವೆ. ಗಾಯಗೊಂಡ ಎಲ್ಲಾ 28 ಪ್ರಯಾಣಿಕರನ್ನು ತೆನ್ಕಾಸಿ ಜಿಲ್ಲಾ ಸರ್ಕಾರಿ ಆಸ್ಪತ್ರೆ ಸೇರಿದಂತೆ ಹತ್ತಿರದ ಆಸ್ಪತ್ರೆಗಳಿಗೆ ಸೇರಿಸಲಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳದಲ್ಲಿದ್ದ ಪೊಲೀಸರು ಮತ್ತು ಸಾರ್ವಜನಿಕರು ಸೇರಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು ಎಂದು ವರದಿಗಳು ಹೇಳುತ್ತವೆ.
ಪೊಲೀಸರು ಈ ಘಟನೆಯ ಬಗ್ಗೆ ವಿವರವಾದ ತನಿಖೆ ಆರಂಭಿಸಿದ್ದು, ಸಿಸಿಟಿವಿ ದೃಶ್ಯಗಳು ಮತ್ತು ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ಪರಿಶೀಲಿಸುತ್ತಿದ್ದಾರೆ. ಅಪಘಾತದಿಂದಾಗಿ ಆ ಪ್ರದೇಶದಲ್ಲಿ ವಾಹನ ಸಂಚಾರ ಸ್ಥಗಿತವಾಗಿದ್ದು, ಸ್ಥಳೀಯ ಜನರು ಮತ್ತು ತುರ್ತು ಸೇವಾ ಸಿಬ್ಬಂದಿ ಸ್ಥಳದಲ್ಲಿ ಸೇರಿದ್ದರಿಂದ ರಸ್ತೆ ಸಂಚಾರಕ್ಕೂ ಅಡೆಚಣೆ ಉಂಟಾಯಿತು.
ಇದನ್ನೂ ಓದಿ : ಈಗ್ಲೂ ಹೈಕಮಾಂಡ್ ಹೇಳಿದಂತೆ ಕೇಳುವೆ | ಸಿಎಂ ಸಿದ್ದರಾಮಯ್ಯ!


















