ಮ್ಯಾಂಚೆಸ್ಟರ್: ಭಾರತದ ಮಾಜಿ ವಿಕೆಟ್-ಕೀಪರ್ ಬ್ಯಾಟರ್ ಫರೋಕ್ ಎಂಜಿನಿಯರ್ ಅವರಿಗೆ ಬುಧವಾರ, ವಿದೇಶಿ ನೆಲದಲ್ಲಿ ಅಪರೂಪದ ಗೌರವವೊಂದು ಸಂದಿದೆ. ಇಂಗ್ಲೆಂಡ್‌ನ ಐತಿಹಾಸಿಕ ಓಲ್ಡ್ ಟ್ರಾಫರ್ಡ್ ಕ್ರಿಕೆಟ್ ಮೈದಾನದ ‘ಬಿ’ ಸ್ಟ್ಯಾಂಡ್‌ಗೆ, ವೆಸ್ಟ್ ಇಂಡೀಸ್ ದಂತಕಥೆ ಸರ್ ಕ್ಲೈವ್ ಲ್ಲಾಯ್ಡ್ ಅವರೊಂದಿಗೆ ಫರೋಕ್ ಎಂಜಿನಿಯರ್ ಅವರ ಹೆಸರನ್ನು ಇಡುವ ಮೂಲಕ ಗೌರವಿಸಲಾಗಿದೆ. ಆದರೆ, ಈ ಐತಿಹಾಸಿಕ ಗೌರವದ ನಡುವೆಯೂ, ತಮ್ಮ ಸ್ವಂತ ದೇಶದಲ್ಲಿ ತಮಗೆ ಸಿಗದ ಮಾನ್ಯತೆಯ ಬಗ್ಗೆ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯ ಆರಂಭವಾಗುವ ಮುನ್ನ, ಇಬ್ಬರೂ ದಿಗ್ಗಜರ ಸಮ್ಮುಖದಲ್ಲಿ “ಸರ್ ಕ್ಲೈವ್ ಲ್ಲಾಯ್ಡ್ ಮತ್ತು ಫರೋಕ್ ಎಂಜಿನಿಯರ್ ಸ್ಟ್ಯಾಂಡ್” ಅನ್ನು ಅಧಿಕೃತವಾಗಿ ಅನಾವರಣಗೊಳಿಸಲಾಯಿತು. ಲಾಂಕಷೈರ್ ಕ್ರಿಕೆಟ್ ಕ್ಲಬ್‌ಗೆ ಈ ಇಬ್ಬರು ಆಟಗಾರರು ನೀಡಿದ ಅಪಾರ ಕೊಡುಗೆಯನ್ನು ಗುರುತಿಸಿ ಈ ಗೌರವ ನೀಡಲಾಗಿದೆ.
“ನನ್ನ ದೇಶದಲ್ಲಿ ಸಿಗದ ಮಾನ್ಯತೆ”: ಎಂಜಿನಿಯರ್ ನೋವಿನ ನುಡಿ
ಈ ಸಂದರ್ಭದಲ್ಲಿ ಮಾತನಾಡಿದ 87 ವರ್ಷದ ಫರೋಕ್ ಎಂಜಿನಿಯರ್, “ಇದು ನನಗೆ ಮಾತ್ರವಲ್ಲ, ಭಾರತಕ್ಕೂ ಹೆಮ್ಮೆಯ ಕ್ಷಣ. ನಾವಿಬ್ಬರೂ ಈ ರೀತಿಯ ಗೌರವ ನಮಗೆ ಸಿಗುತ್ತದೆ ಎಂದು ಎಂದಿಗೂ ಭಾವಿಸಿರಲಿಲ್ಲ. ದೇವರು ದೊಡ್ಡವನು. ನನ್ನ ಸ್ವಂತ ದೇಶದಲ್ಲಿ ಸಿಗದ ಮಾನ್ಯತೆಗೆ ಈ ಗೌರವವು ಸಮಾಧಾನ ತಂದಿದೆ,” ಎಂದು ಭಾವುಕರಾಗಿ ನುಡಿದರು.
ತಮ್ಮ ಹೆಚ್ಚಿನ ಕ್ರಿಕೆಟ್ ಅನ್ನು ಬಾಂಬೆಯ (ಈಗಿನ ಮುಂಬೈ) ಬ್ರೇಬೋರ್ನ್ ಕ್ರೀಡಾಂಗಣದಲ್ಲಿ ಆಡಿದ್ದನ್ನು ಸ್ಮರಿಸಿದ ಅವರು, “ನಾನು ಹೆಚ್ಚು ಕ್ರಿಕೆಟ್ ಆಡಿದ ಸ್ಥಳದಲ್ಲಿಯೇ ನನ್ನ ಸಾಧನೆಗಳಿಗೆ ಮಾನ್ಯತೆ ಸಿಗದಿರುವುದು ನಾಚಿಕೆಗೇಡಿನ ಸಂಗತಿ,” ಎಂದು ತಮ್ಮ ಅಸಮಾಧಾನವನ್ನು ಹೊರಹಾಕಿದರು. ಆದಾಗ್ಯೂ, 2024ರಲ್ಲಿ ತಮಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿದ ಬಿಸಿಸಿಐಗೆ ಅವರು ಧನ್ಯವಾದ ಅರ್ಪಿಸಿದರು.
ಲ್ಲಾಯ್ಡ್ ಸಂತಸ, ಸ್ಪೂರ್ತಿದಾಯಕ ಮಾತು
ಈ ಗೌರವವನ್ನು ಫರೋಕ್ ಎಂಜಿನಿಯರ್ ಅವರೊಂದಿಗೆ ಹಂಚಿಕೊಂಡಿರುವುದು ತಮಗೆ ಸಂದ ದೊಡ್ಡ ಸೌಭಾಗ್ಯ ಎಂದು ವೆಸ್ಟ್ ಇಂಡೀಸ್‌ನ ದಂತಕಥೆ ಸರ್ ಕ್ಲೈವ್ ಲ್ಲಾಯ್ಡ್ ಹೇಳಿದರು. “ಈ ಗೌರವವನ್ನು ನಾನು ನನ್ನ ಉತ್ತಮ ಸ್ನೇಹಿತ ಮತ್ತು ಸಹೋದರನಾದ ಫರೋಕ್, ನಮ್ಮ ಎಲ್ಲಾ ತಂಡದ ಸಹ ಆಟಗಾರರು ಮತ್ತು ನನ್ನ ಗೆಲುವು-ಸೋಲುಗಳಲ್ಲಿ ಜೊತೆಗಿದ್ದ ಲಾಂಕಷೈರ್ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತೇನೆ.
ಕೆಟ್ ಯಾವಾಗಲೂ ಒಂದು ತಂಡದ ಆಟ, ಮತ್ತು ಈ ಸ್ಟ್ಯಾಂಡ್ ಮೇಲಿನ ನನ್ನ ಹೆಸರು ನನ್ನ ಈ ಪಯಣದಲ್ಲಿ ಸಹಾಯ ಮಾಡಿದ ಎಲ್ಲರನ್ನೂ ಪ್ರತಿಬಿಂಬಿಸುತ್ತದೆ,” ಎಂದು ಅವರು ಹೇಳಿದರು. “ವಿಶ್ವದಾದ್ಯಂತದ ಯುವ ಆಟಗಾರರು ಈ ಸ್ಟ್ಯಾಂಡ್ ಅನ್ನು ನೋಡಿ ಸ್ಪೂರ್ತಿ ಪಡೆಯುತ್ತಾರೆ ಎಂದು ನಾನು ಭಾವಿಸುತ್ತೇನೆ,” ಎಂದರು.
ಲಾಂಕಷೈರ್‌ಗೆ ಇಬ್ಬರು ದಿಗ್ಗಜರ ಕೊಡುಗೆ
ಫರೋಕ್ ಎಂಜಿನಿಯರ್ ಮತ್ತು ಕ್ಲೈವ್ ಲ್ಲಾಯ್ಡ್ ಇಬ್ಬರೂ ಲಾಂಕಷೈರ್ ಕ್ರಿಕೆಟ್ ಕ್ಲಬ್‌ನ ಸುವರ್ಣ ಯುಗದ ರೂವಾರಿಗಳು. 1968 ರಿಂದ 1976 ರವರೆಗೆ ಲಾಂಕಷೈರ್ ಪರ ಆಡಿದ ಎಂಜಿನಿಯರ್, 175 ಪಂದ್ಯಗಳಲ್ಲಿ 5,942 ರನ್, 429 ಕ್ಯಾಚ್‌ಗಳು ಮತ್ತು 35 ಸ್ಟಂಪಿಂಗ್‌ಗಳ ಮೂಲಕ ಮಿಂಚಿದ್ದರು. ಅವರ ಆಕರ್ಷಕ ಬ್ಯಾಟಿಂಗ್ ಮತ್ತು ಚುರುಕಿನ ವಿಕೆಟ್-ಕೀಪಿಂಗ್ ಕೌಶಲ್ಯವು ಲಾಂಕಷೈರ್ ತಂಡವನ್ನು 1970ರ ದಶಕದಲ್ಲಿ ಏಕದಿನ ಕ್ರಿಕೆಟ್‌ನ ಅಜೇಯ ಶಕ್ತಿಯನ್ನಾಗಿ ಮಾಡಿತ್ತು.
ಅವರಿಬ್ಬರೂ ತಂಡಕ್ಕೆ ಸೇರಿದಾಗ, ಲಾಂಕಷೈರ್ 1950ರ ನಂತರ ಯಾವುದೇ ಪ್ರಮುಖ ಪ್ರಶಸ್ತಿಯನ್ನು ಗೆದ್ದಿರಲಿಲ್ಲ. ಆದರೆ, ಎಂಟು ವರ್ಷಗಳ ನಂತರ, ಈ ಜೋಡಿಯು ನಾಲ್ಕು ಬಾರಿ ಗಿಲೆಟ್ ಕಪ್ (1970, 1971, 1972, 1975) ಮತ್ತು ಎರಡು ಬಾರಿ ಜಾನ್ ಪ್ಲೇಯರ್ ಲೀಗ್ (1969, 1970) ಗೆಲ್ಲುವ ಮೂಲಕ ತಂಡವನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿತ್ತು. ಪ್ರಸ್ತುತ, ಇಬ್ಬರೂ ಓಲ್ಡ್ ಟ್ರಾಫರ್ಡ್‌ನ ಉಪಾಧ್ಯಕ್ಷರಾಗಿದ್ದು, 2020ರಲ್ಲಿ ಕ್ಲಬ್‌ನ ‘ಹಾಲ್ ಆಫ್ ಫೇಮ್’ಗೆ ಸೇರ್ಪಡೆಯಾದ ಮೊದಲ ಆಟಗಾರರಲ್ಲಿ ಒಬ್ಬರಾಗಿದ್ದಾರೆ.



















