ಉಡುಪಿ: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿ ಪಟ್ಟಣ ಪಂಚಾಯಿತಿಯನ್ನು ರದ್ದುಗೊಳಿಸುವಂತೆ ಕೋರಿ ಅನಿರ್ದಿಷ್ಟಾವಧಿ ಧರಣಿಯನ್ನು ನಡೆಸಲಾಗುತ್ತಿದೆ. ಪ್ರತಿನಿತ್ಯ ರೈತರು ತಮ್ಮ ಕೆಲಸಗಳನ್ನು ಬಿಟ್ಟು ಬೈಂದೂರು ತಾಲೂಕು ಆಡಳಿತ ಕೇಂದ್ರದ ಎದುರುಗಡೆ ಧರಣಿಯನ್ನು ಮಾಡುತ್ತಿದ್ದಾರೆ. ಇಂದು 33ನೇ ದಿನ, ಪಟ್ಟಣ ಪಂಚಾಯಿತಿ ವಿಚಾರವಾಗಿ ಪ್ರತಿನಿಧಿಗಳ ಆಶ್ವಾಸನೆಗಳಿಗೆ ತಕ್ಕಂತೆ ಕೆಲಸಗಳು ನಡೆಯುತ್ತಿಲ್ಲ, ಹೀಗಾಗಿ ಹೋರಾಟವನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗುವಂತಹ ಸೂಚನೆಯನ್ನು ಧರಣಿಯ ನೇತೃತ್ವ ವಹಿಸಿದ ದೀಪಕ್ ಕುಮಾರ್ ಶೆಟ್ಟಿ ನೀಡಿದ್ದಾರೆ.
ಬೈಂದೂರು ತಾಲೂಕು ಆಡಳಿತ ಕೇಂದ್ರದ ಎದುರುಗಡೆ ಮಾತನಾಡಿದ ದೀಪಕ್ ಕುಮಾರ್ ಶೆಟ್ಟಿ “ಸೋಮವಾರದಿಂದ ನಮ್ಮ ಹೋರಾಟ ಇನ್ನೊಂದು ಹಂತಕ್ಕೆ ತಲುಪಲಿದೆ. ಹೊಂದಾಣಿಕೆಯ ರಾಜಕಾರಣದಿಂದ ರೈತರಿಗೆ ಅನ್ಯಾಯವಾಗುತ್ತಿದೆ. ನ್ಯಾಯ ಸಿಗದೇ ಪತಿಭಟನೆ ಹಿಂದಕ್ಕೆ ತೆಗೆದುಕೊಳ್ಳುವ ಮಾತೇ ಇಲ್ಲ. ತೀವ್ರ ಸ್ವರೂಪದ ಹೋರಾಟದಿಂದ ಸಾವು ನೋವುಗಳಾದರೆ ಅದಕ್ಕೇ ನೇರ ಹೊಣೆ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ” ಎಂದು ಹೇಳಿದ್ದಾರೆ
ಇನ್ನು ಈ ಸಂದರ್ಭದಲ್ಲಿ ಪ್ರಭಾಕರ್ ಗಾಣಿಗ, ಅರುಣ್ ಕುಮಾರ್, ಕಂಬಳ ಸಂಘಟನೆಯ ಪ್ರತಿನಿಧಿಗಳು ಹಾಗೂ ರೈತರು ಹೋರಾಟದಲ್ಲಿ ಭಾಗಿಯಾಗಿದ್ದರು.



















