ಕ್ರೀಡೆಯಲ್ಲಿ ಯಾವುದೂ ಶಾಶ್ವತವಲ್ಲ. ಡಾನ್ ಬ್ರಾಡ್ಮನ್ನಿಂದ ಹಿಡಿದು ವಿರಾಟ್ ಕೊಹ್ಲಿಯವರೆಗೆ, ಪ್ರತಿಯೊಬ್ಬ ದಂತಕಥೆಯೂ ಇದನ್ನು ಅನುಭವಿಸಿದ್ದಾರೆ. ಇದೇ ವರ್ಷದ ಆರಂಭದಲ್ಲಿ, ಸಿಡ್ನಿ ಟೆಸ್ಟ್ನಲ್ಲಿ ವಿರಾಟ್ ಕೊಹ್ಲಿ ನಿರಾಸೆಯಿಂದ ತಮ್ಮ ವೃತ್ತಿಜೀವನವನ್ನು ಆಸ್ಟ್ರೇಲಿಯಾದಲ್ಲಿ ಮುಗಿಸಿದ್ದರು. ರೋಹಿತ್ ಶರ್ಮಾ ಅವರ ಕಥೆಯೂ ಭಿನ್ನವಾಗಿರಲಿಲ್ಲ. ಆದರೆ, ಒಂಬತ್ತು ತಿಂಗಳ ನಂತರ, ಇದೇ ಸಿಡ್ನಿ ಮೈದಾನದಲ್ಲಿ, ಈ ಇಬ್ಬರು ದಿಗ್ಗಜರು ತಮ್ಮ ಆಸ್ಟ್ರೇಲಿಯಾ ವೃತ್ತಿಜೀವನಕ್ಕೆ ಒಂದು ಸ್ಮರಣೀಯ, ಭರ್ಜರಿ ವಿದಾಯ ಹೇಳಿದರು. ಅಭಿಮಾನಿಗಳ ಪ್ರೀತಿಗೆ ರನ್-ಹಬ್ಬದ ಉಡುಗೊರೆ ನೀಡಿದ ಈ ಜೋಡಿಯ ಪ್ರದರ್ಶನವು ನಿಜಕ್ಕೂ ‘ಪೈಸಾ ವಸೂಲ್’ ಆಗಿತ್ತು.

ಶನಿವಾರ ನಡೆದ ಮೂರನೇ ಏಕದಿನ ಪಂದ್ಯವು ಸರಣಿಯ ದೃಷ್ಟಿಯಿಂದ ‘ಡೆಡ್ ರಬ್ಬರ್’ ಆಗಿದ್ದರೂ, ಸಿಡ್ನಿ ಕ್ರಿಕೆಟ್ ಗ್ರೌಂಡ್ (SCG) ಸಂಪೂರ್ಣವಾಗಿ ತುಂಬಿ ತುಳುಕುತ್ತಿತ್ತು. ಇದಕ್ಕೆ ಕಾರಣ ಒಂದೇ – ತಮ್ಮ ನೆಚ್ಚಿನ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯವರನ್ನು, ಬಹುಶಃ ಆಸ್ಟ್ರೇಲಿಯಾದ ನೆಲದಲ್ಲಿ ಕೊನೆಯ ಬಾರಿಗೆ ಕಣ್ತುಂಬಿಕೊಳ್ಳುವುದು. ಅಭಿಮಾನಿಗಳ ಈ ಪ್ರೀತಿಗೆ ‘ರೋ-ಕೋ’ ಜೋಡಿಯು 168 ರನ್ಗಳ ಮುರಿಯದ ಜೊತೆಯಾಟವಾಡಿ, ಸ್ಮರಣೀಯ ಗೆಲುವನ್ನು ತಂದುಕೊಡುವ ಮೂಲಕ ಪ್ರತಿಯಾಗಿ ಗೌರವ ಸಲ್ಲಿಸಿತು.
ಭಾವನಾತ್ಮಕ ಸ್ವಾಗತ, ಸ್ಫೋಟಕ ಬ್ಯಾಟಿಂಗ್
ಸ್ಟೇಡಿಯಂನ ಮೂಲೆ ಮೂಲೆಯಲ್ಲೂ “ಹಿಯರ್ ಫಾರ್ ರೋ-ಕೋ” (Here for Ro-Ko) ಎಂಬ ಬ್ಯಾನರ್ಗಳು ರಾರಾಜಿಸುತ್ತಿದ್ದವು. ಭಾರತದ ಜೆರ್ಸಿ ತೊಟ್ಟ ಅಭಿಮಾನಿಗಳೇ ಹೆಚ್ಚಿದ್ದರೂ, ಆಸ್ಟ್ರೇಲಿಯಾದ ಪ್ರೇಕ್ಷಕರೂ ಸಹ ಈ ಇಬ್ಬರು ದಂತಕಥೆಗಳಿಗೆ ಗೌರವ ಸಲ್ಲಿಸಲು ಬಂದಿದ್ದರು. ವಿರಾಟ್ ಕೊಹ್ಲಿ ಬ್ಯಾಟಿಂಗ್ಗೆ ಇಳಿದಾಗ, ಇಡೀ ಕ್ರೀಡಾಂಗಣವೇ ಎದ್ದು ನಿಂತು ಚಪ್ಪಾಳೆ ತಟ್ಟಿ ಸ್ವಾಗತಿಸಿತು.
ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಸತತವಾಗಿ ಶೂನ್ಯಕ್ಕೆ ಔಟಾಗಿ ತೀವ್ರ ಒತ್ತಡದಲ್ಲಿದ್ದ ಕೊಹ್ಲಿ, ತಾವು ಎದುರಿಸಿದ ಮೊದಲ ಎಸೆತದಲ್ಲಿ ಒಂದು ರನ್ ಗಳಿಸುತ್ತಿದ್ದಂತೆ ಇಡೀ ಸ್ಟೇಡಿಯಂ ಗರ್ಜಿಸಿತು. ಏಳು ತಿಂಗಳ ನಂತರ ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಮತ್ತು ಆಸ್ಟ್ರೇಲಿಯಾ ನೆಲದಲ್ಲಿ ತಾವು ಗಳಿಸಿದ ಮೊದಲ ರನ್ಗೆ ಕೊಹ್ಲಿ ಕೂಡಾ ಮುಷ್ಟಿ ಬಿಗಿದು ಸಂಭ್ರಮಿಸಿದರು. ಆ ನಂತರ, ಮಿಚೆಲ್ ಸ್ಟಾರ್ಕ್ ಬೌಲಿಂಗ್ನಲ್ಲಿ ಬಾರಿಸಿದ ಟ್ರೇಡ್ಮಾರ್ಕ್ ಸ್ಟ್ರೈಟ್ ಡ್ರೈವ್, ಪ್ರೇಕ್ಷಕರನ್ನು ಹುಚ್ಚೆಬ್ಬಿಸಿತು. ತವರಿನಂತಿದ್ದ ಪ್ರೇಕ್ಷಕರ ಬೆಂಬಲದಿಂದ ಆತ್ಮವಿಶ್ವಾಸ ಹೆಚ್ಚಿಸಿಕೊಂಡ ಕೊಹ್ಲಿ, ಅಜೇಯ 74 ರನ್ ಗಳಿಸಿ ಮಿಂಚಿದರು.
ಹಿಟ್ಮ್ಯಾನ್ನ ಕ್ಲಾಸಿಕ್ ಶೋ
ಮತ್ತೊಂದೆಡೆ, ರೋಹಿತ್ ಶರ್ಮಾ ತಮ್ಮ ಹಳೆಯ ಖದರ್ ಪ್ರದರ್ಶಿಸಿದರು. ಸರಣಿಯ ಆರಂಭದಲ್ಲಿ ತುಸು ಮಂಕಾಗಿದ್ದ ಅವರು, ಅಡಿಲೇಡ್ನಲ್ಲಿ ಅರ್ಧಶತಕ ಸಿಡಿಸಿ ಲಯ ಕಂಡುಕೊಂಡಿದ್ದರು. ಸಿಡ್ನಿಯಲ್ಲಿ ತಮ್ಮ ವಿಶ್ವರೂಪ ದರ್ಶನ ಮಾಡಿಸಿದ ಹಿಟ್ಮ್ಯಾನ್, ಸ್ಪಿನ್ ಮತ್ತು ವೇಗದ ಬೌಲಿಂಗ್ ಅನ್ನು ಸಮರ್ಥವಾಗಿ ದಂಡಿಸಿದರು. ಆಡಮ್ ಜಂಪಾ ಬೌಲಿಂಗ್ನಲ್ಲಿ ಅವರು ಬಾರಿಸಿದ ಇನ್ಸೈಡ್-ಔಟ್ ಶಾಟ್ಗಳು ಅವರ ಆತ್ಮವಿಶ್ವಾಸಕ್ಕೆ ಸಾಕ್ಷಿಯಾಗಿದ್ದವು. ಅಜೇಯ 121 ರನ್ ಸಿಡಿಸಿ, ತಮ್ಮ 33ನೇ ಏಕದಿನ ಶತಕವನ್ನು ಪೂರೈಸಿದರು.
ಅವರ ಬ್ಯಾಟಿಂಗ್ ಮಾತ್ರವಲ್ಲ, ವಿಕೆಟ್ಗಳ ನಡುವಿನ ಓಟವೂ ಎಲ್ಲರ ಗಮನ ಸೆಳೆಯಿತು. 11 ಕೆಜಿ ತೂಕ ಇಳಿಸಿಕೊಂಡು ಫಿಟ್ ಆಗಿದ್ದ ರೋಹಿತ್, ಕೊಹ್ಲಿ ಜೊತೆಗೂಡಿ ಒಂದೊಂದು ರನ್ಗಳನ್ನು ಎರಡಾಗಿಸಿ, ಎರಡನ್ನು ಮೂರಾಗಿಸಿ ತಮ್ಮ ಫಿಟ್ನೆಸ್ ಸಾಬೀತುಪಡಿಸಿದರು.
ವಿದಾಯದ ಮಾತುಗಳು
ಪಂದ್ಯದ ನಂತರ ಮಾತನಾಡಿದ ರೋಹಿತ್ ಶರ್ಮಾ, “ಇಲ್ಲಿಗೆ ಬಂದು ಆಡುವುದು ನನಗೆ ಯಾವಾಗಲೂ ಇಷ್ಟ. 2008ರ ನೆನಪುಗಳು ಇನ್ನೂ ಹಸಿರಾಗಿವೆ. ನಾವು ಮತ್ತೆ ಆಸ್ಟ್ರೇಲಿಯಾಗೆ ಬರುತ್ತೇವೆಯೋ ಇಲ್ಲವೋ ಗೊತ್ತಿಲ್ಲ, ಆದರೆ ಇಲ್ಲಿ ಆಡಿದ ಕ್ಷಣಗಳು ಯಾವಾಗಲೂ ಸ್ಮರಣೀಯ,” ಎಂದು ಹೇಳುವ ಮೂಲಕ, ಇದು ತಮ್ಮ ವಿದಾಯದ ಪ್ರವಾಸ ಎಂಬ ಸುಳಿವನ್ನು ನೀಡಿದರು



















