ಬೆಂಗಳೂರು: ವಾಮನ ಚಿತ್ರದ ತಾಯಿ-ಮಗನ ಬಾಂಧವ್ಯ ಸಾರುವ ಹಾಡಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಚೇತನ್ ಗೌಡ ನಿರ್ಮಾಣದ, ಶಂಕರ್ ರಾಮನ್ ಎಸ್, ನಿರ್ದೇಶನದ ಹಾಗೂ ಧನ್ವೀರ್ ನಾಯಕ ನಟರಾಗಿ ನಟಿಸಿದ್ದಾರೆ. ಈ ಚಿತ್ರ ಏಪ್ರಿಲ್ 10 ರಂದು ತೆರೆಗೆ ಬರಲು ಸಿದ್ಧವಾಗಿದೆ. “ಈಕ್ವಿನಾಕ್ಸ್ ಗ್ಲೋಬಲ್ ಎಂಟರ್ಟೈನ್ಮೆಂಟ್” ಬ್ಯಾನರ್ ಅಡಿಯಲ್ಲಿ ಚೇತನ್ ಗೌಡ ನಿರ್ಮಿಸಿರುವ, ಶಂಕರ್ ರಾಮನ್ ಎಸ್ ನಿರ್ದೇಶನದ “ವಾಮನ” ಚಿತ್ರಕ್ಕಾಗಿ ಪ್ರಮೋದ್ ಮರವಂತೆ “ಕಂದ ಕನಸ ರೂಪ” ಎಂಬ ತಾಯಿ – ಮಗನ ಬಾಂಧವ್ಯದ ಬಗ್ಗೆ ಹಾಡು ಬರೆದಿದ್ದಾರೆ.
ದರ್ಶನ್ ಅವರ ಧರ್ಮಪತ್ನಿ ವಿಜಯಲಕ್ಷ್ಮಿ ದರ್ಶನ್ ಈ ಹಾಡನ್ನು ಬಿಡುಗಡೆ ಮಾಡಿದರು. “ಕಾಂತಾರ” ಖ್ಯಾತಿಯ ವೆಂಕಟೇಶ್ ಡಿ.ಸಿ ಈ ಹಾಡನ್ನು ಹಾಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿರುವ ಈ ಹಾಡಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. A2 music ಮೂಲಕ ಈ ಹಾಡು ಬಿಡುಗಡೆಯಾಗಿದೆ. ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ.
ನಾಯಕ ಧನ್ವೀರ್ ಮಾತನಾಡಿ, ಇದು ನನ್ನ ಅಭಿನಯದ ನಾಲ್ಕನೇ ಚಿತ್ರ. ನನ್ನ ಮೊದಲ ಚಿತ್ರದಿಂದಲೂ ಎಲ್ಲರೂ ನೀಡುತ್ತಿರುವ ಪ್ರೋತ್ಸಾಹಕ್ಕೆ ನಾನು ಚಿರಋಣಿ. “ವಾಮನ” ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ. ಪ್ರಮೋದ್ ಮರವಂತೆ ಬರೆದಿರುವ ಅಮ್ಮ – ಮಗನ ಬಾಂಧವ್ಯದ ಈ ಹಾಡು ಎಲ್ಲರ ಪ್ರಶಂಸೆಗೆ ಪಾತ್ರವಾಗಲಿದೆ ಎಂದಿದ್ದಾರೆ.
“ವಾಮನ” ಚಿತ್ರದ ತಾಯಿ – ಮಗನ ಬಾಂಧವ್ಯದ ಈ ಹಾಡನ್ನು ವಿಶ್ವದ ಎಲ್ಲಾ ತಾಯಂದಿರಿಗೆ ಅರ್ಪಿಸುತ್ತೇನೆ ಎಂದು ಮಾತನಾಡಿದ ನಿರ್ದೇಶಕ ಶಂಕರ್ ರಾಮನ್ ಎಸ್, ನನಗೆ ತಾಯಿಯನ್ನು ಕುರಿತಾದ “ಕೈ ತುತ್ತು ಕೊಟ್ಟವಳೆ ಐ ಲವ್ ಯು ಮದರ್ ಇಂಡಿಯಾ” ಹಾಗೂ “ಬೇಡುವೆನು ವರವನು ಕೊಡೆ ತಾಯಿ ಜನುಮವನು” ಹಾಡುಗಳು ತುಂಬಾ ಇಷ್ಟ. ಅಂತಹುದೇ ಹಾಡು ನಮ್ಮ ಚಿತ್ರಕ್ಕೆ ಬೇಕು ಎಂದು ಕೇಳಿದಾಗ ಪ್ರಮೋದ್ ಮರವಂತೆ ಈ ಸುಂದರ ಹಾಡು ಬರೆದಿದ್ದಾರೆ.
ಗಾಯಕ ವೆಂಕಟೇಶ್ ಡಿ.ಸಿ, ಚಿತ್ರದಲ್ಲಿ ನಟಿಸಿರುವ ಪೆಟ್ರೋಲ್ ಪ್ರಸನ್ನ, ಶಿವರಾಜ್ ಕೆ.ಆರ್ ಪೇಟೆ, ಕಾಕ್ರೋಜ್ ಸುಧೀ ಸೇರಿದಂತೆ ಹಲವರು ಮಾತನಾಡಿದ್ದಾರೆ.