ಶಿವಮೊಗ್ಗ: ಮನೆಯವರು ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಪ್ರೇಮಿಗಳಿಬ್ಬರು ಕಾಲುವೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜಿಲ್ಲೆಯ ಭದ್ರಾವತಿ ತಾಲೂಕಿನ ಯಕ್ಕುಂದ ಗ್ರಾಮದ ಬಳಿಯ ಭದ್ರಾ ಕಾಲುವೆಯಲ್ಲಿ ನಡೆದಿದೆ.
ಅದೃಷ್ಟವಶತ್ ಘಟನೆಯಲ್ಲಿ ಯುವಕ ಪಾರಾಗಿದ್ದು,ಯುವತಿ ಸಾವನ್ನಪ್ಪಿದ್ದಾಳೆ.
ಅಂತರಗಂಗೆ ಭೋವಿ ಕಾಲೋನಿ ನಿವಾಸಿ ಸ್ವಾತಿ (19) ಮೃತಪಟ್ಟಿದ್ದು, ಯುವಕ ಸೂರ್ಯ (20) ಪಾರಾಗಿದ್ದಾನೆ.
ಯುವತಿಯು ಪ್ರಥಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದಳು. ಯುವಕ ಕೆಲಸಕ್ಕೆ ಹೋಗುತ್ತಿದ್ದ. ಇವರಿಬ್ಬರು ನೆರೆಹೊರೆಯ ನಿವಾಸಿಗಳಾಗಿದ್ದು, ಕಳೆದ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರ ಪ್ರೀತಿ ವಿಚಾರ ಮನೆಯವರಿಗೆ ಗೊತ್ತಾಗಿ, ಬುದ್ಧಿವಾದ ಹೇಳಿದ್ದರು ಎನ್ನಲಾಗಿದೆ.
ಇದರಿಂದ ಮನನೊಂದ ಜೋಡಿ ಇರುವೆ ಪುಡಿ ಸೇವಿಸಿ ಬಳಿಕ ಅಂತರಗಂಗೆಯ ಉಕ್ಕುಂದದಲ್ಲಿರುವ ಕಾಲುವೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದರು. ಈ ವೇಳೆ ಮರದ ದಿಮ್ಮಿಯ ಸಹಾಯದಿಂದ ಸೂರ್ಯ ಪಾರಾಗಿದ್ದು, ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವತಿ ಸಾವನ್ನಪ್ಪಿದ್ದು, ಆಕೆಯ ಮೃತದೇಹವನ್ನು ಕಾಲುವೆಯಿಂದ ಮೇಲಕ್ಕೆತ್ತಲಾಗಿದೆ. ಈ ಸಂಬಂಧ ಭದ್ರಾವತಿ ಗ್ರಾಮಾಂತರ ಠಾಣಾಯಲ್ಲಿ ಪ್ರಕರಣ ದಾಖಲಾಗಿದೆ.