ಬೆಂಗಳೂರು: ಇಂದಿನ ಆನ್ ಲೈನ್ ಯುಗದಲ್ಲಿ ನಮ್ಮ ಯಾವುದೇ ಡೇಟಾ ಸುರಕ್ಷಿತವಾಗಿಲ್ಲ. ಕ್ರೆಡಿಟ್ ಕಾರ್ಡ್ ಬಳಕೆ, ಯುಪಿಐ ಪೇಮೆಂಟ್ ಸೇರಿ ಹಲವು ರೀತಿಯಲ್ಲಿ ನಾವು ಹಣ ಪಾವತಿಸಿದಾಗಲೇ ಮಾಹಿತಿಯ ಸೋರಿಕೆಯಾಗುತ್ತದೆ. ಇದು ಆನ್ ಲೈನ್ ವಂಚನೆಗೆ ಕಾರಣವಾಗುತ್ತಿದೆ. ಅದರಲ್ಲೂ, ಸೈಬರ್ ವಂಚಕರು ಹತ್ತಾರು ಮಾರ್ಗಗಳನ್ನು ಬಳಸಿ ಜನರ ದುಡ್ಡನ್ನು ಕಬಳಿಸುತ್ತಿದ್ದಾರೆ. ಈಗ ನಿಮ್ಮ ಕ್ರೆಡಿಟ್ ಕಾರ್ಡ್ ಲಿಮಿಟ್ ಹೆಚ್ಚಿಸುತ್ತೇವೆ ಎಂಬುದಾಗಿ ವಂಚನೆ ಮಾಡುತ್ತಿರುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿವೆ.
ಹೌದು, ನಿಮ್ಮ ಕ್ರೆಡಿಟ್ ಕಾರ್ಡ್ ಕಂಪನಿಯಿಂದ ಕರೆ ಮಾಡುತ್ತಿದ್ದೇವೆ. ಯಾವುದೇ ಶುಲ್ಕವಿಲ್ಲದೆ, ಹೆಚ್ಚು ತಲೆನೋವು ಇಲ್ಲದೆ ನಿಮ್ಮ ಕ್ರೆಡಿಟ್ ಕಾರ್ಡ್ ಮಿತಿಯನ್ನು ಹೆಚ್ಚಿಸುತ್ತೇವೆ ಎಂದು ವಂಚಕರು ಕರೆ ಮಾಡುತ್ತಾರೆ. ಅವರನ್ನು ನಂಬಿ ನೀವೇನಾದರೂ ಒಟಿಪಿ, ಸಿವಿವಿ ಸೇರಿ ಯಾವುದೇ ಮಾಹಿತಿ ನೀಡಿದರೆ, ನಿಮ್ಮ ಖಾತೆಯಲ್ಲಿರುವ ಹಣವನ್ನೆಲ್ಲ ಅವರು ಲಪಟಾಯಿಸುತ್ತಾರೆ.
ಇದಾವುದನ್ನೂ ನಂಬದಿರಿ
ನಿಮ್ಮ ಕ್ರೆಡಿಟ್ ಕಾರ್ಡ್ ಕಂಪನಿಯಿಂದ ಕರೆ ಮಾಡುತ್ತಿದ್ದೇವೆ. ನಿಮ್ಮ ಕ್ರೆಡಿಟ್ ಕಾರ್ಡ್ ಲಿಮಿಟ್ ಜಾಸ್ತಿ ಮಾಡುತ್ತೇವೆ ಎಂದರೆ ನೀವು ನಂಬದಿರಿ. ಹಾಗೆಯೇ, ಕ್ರೆಡಿಟ್ ಕಾರ್ಡ್ ಲಿಮಿಟ್ ಜಾಸ್ತಿ ಮಾಡುವ ಕುರಿತು ನಿಮ್ಮ ಮೊಬೈಲ್ ಗೆ ಬರುವ ಲಿಂಕ್, ಎಪಿಕೆ ಫೈಲ್, ವಾಟ್ಸ್ ಆ್ಯಪ್ ನಲ್ಲಿ ಕಳಿಸುವ ಲಿಂಕ್ ಸೇರಿ ಯಾವುದರ ಮೇಲೂ ಕ್ಲಿಕ್ ಮಾಡದಿರಿ. ಹೀಗೆ ಮಾಡಿದರೆ ಮಾತ್ರ ಸೈಬರ್ ಸುರಕ್ಷತೆ ಇರುತ್ತದೆ. ಇಲ್ಲದಿದ್ದರೆ ಹಣವನ್ನು ವಂಚಕರು ಲಪಟಾಯಿಸುತ್ತಾರೆ.
ಒಂದಷ್ಟು ಸಂಗತಿ ಗೊತ್ತಿರಲಿ
ಯಾವುದೇ ಕ್ರೆಡಿಟ್ ಕಾರ್ಡ್ ಲಿಮಿಟ್ ಜಾಸ್ತಿ ಮಾಡಲು ಗ್ರಾಹಕರಿಗೆ ಒಟಿಪಿ ಕೇಳುವುದಿಲ್ಲ ಎಂದು ಈಗಾಗಲೇ ಬ್ಯಾಂಕ್ ಗಳು ತಿಳಿಸಿವೆ. ಹಾಗಾಗಿ, ಮೊಬೈಲ್ ಗೆ ಬರುವ ಕರೆಗಳನ್ನು ನಂಬಬಾರದು. ಹಾಗೆಯೇ, ಯಾರೊಂದಿಗೂ ನಮ್ಮ ಮೊಬೈಲ್ ಗೆ ಬರುವ ಒಟಿಪಿ, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಹಿಂದಿರುವ ಸಿವಿವಿ ಸೇರಿ ಯಾವುದೇ ಮಾಹಿತಿಯನ್ನು ಎಂಥಾ ಸಂದರ್ಭದಲ್ಲೂ ಹಂಚಿಕೊಳ್ಳಬಾರದು. ಇದಕ್ಕೂ ಮೀರಿ ವಂಚನೆ ನಡೆದರೆ ಕೂಡಲೇ https://cybercrime.gov.in/ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ದೂರು ದಾಖಲಿಸಿ.
ಇದನ್ನೂ ಓದಿ: ‘ಪ್ರೆಗ್ನೆಂಟ್ ಜಾಬ್’ ವಂಚಕರ ಬಲೆ: ಹಣದಾಸೆಗೆ 11 ಲಕ್ಷ ರೂ. ಕಳೆದುಕೊಂಡು ಕಂಗಾಲಾದ ಗುತ್ತಿಗೆದಾರ!



















