ಬೆಂಗಳೂರು: ದೇಶದಲ್ಲಿ ಪ್ರತಿ ದಿನ ಸಾವಿರಾರು ಜನ ಆನ್ ಲೈನ್ ವಂಚನೆ ಜಾಲಕ್ಕೆ ಸಿಲುಕಿ ಹಣ ಕಳೆದುಕೊಳ್ಳುತ್ತಿದ್ದಾರೆ. ಷೇರು ಮಾರುಕಟ್ಟೆಯಲ್ಲಿ ಹಣ ದುಪ್ಪಟ್ಟು ಮಾಡುತ್ತೇವೆ ಎಂದೋ, ನಿಮ್ಮನ್ನು ಡಿಜಿಟಲ್ ಅರೆಸ್ಟ್ ಮಾಡಿದ್ದೇವೆ ಎಂದೋ, ಬ್ಯಾಂಕ್ ಅಧಿಕಾರಿಗಳು ಎಂದೋ ವಂಚಿಸುವವರ ಸಂಖ್ಯೆ ಜಾಸ್ತಿ ಇದೆ. ಇದರ ಬೆನ್ನಲ್ಲೇ, ಮತ್ತೊಂದು ವಂಚನೆಯ ಮುಖವಾಡ ಬಯಲಾಗಿದೆ. ಜನರ ವಾಟ್ಸ್‌ಆ್ಯಪ್‌ಗೆ ಆರ್ ಟಿ ಒ ಅಧಿಕಾರಿ ಹೆಸರಿನಲ್ಲಿ ನಕಲಿ ಚಲನ್ ಕಳುಹಿಸಿ ವಂಚಿಸುವ ಜಾಲವೀಗ ಪತ್ತೆಯಾಗಿದೆ.
ಏನಿದು ಸ್ಕ್ಯಾಮ್?
ನಕಲಿ ಆರ್ ಟಿ ಒ ಹೆಸರಿನಲ್ಲಿ ಜನರ ವಾಟ್ಸ್ ಆ್ಯಪ್ ಗೆ ಚಲನ್ ಬರುತ್ತದೆ. ನೀವು ಈ ವಾಹನ ಚಲಾಯಿಸಿ ಸಂಚಾರ ದಟ್ಟಣೆಯ ನಿಯಮ ಉಲ್ಲಂಘಿಸಿದ್ದೀರಿ. ನೀವು ಇಷ್ಟು ಫೈನ್ ಕಟ್ಟಬೇಕು ಎಂದು ತಿಳಿಸಲಾಗುತ್ತದೆ. ಹಾಗೆಯೇ, ಆನ್ ಲೈನ್ ಮೂಲಕ ಹಣ ಪಾವತಿಸಿ ಎಂದು ಎಪಿಕೆ ಫೈಲ್ ಒಂದನ್ನ ಕಳುಹಿಸಲಾಗುತ್ತದೆ. ಜನ ಏನಾದರೂ ಯಾಮಾರಿ ಆ ಎಪಿಕೆ ಫೈಲ್ ಇನ್ ಸ್ಟಾಲ್ ಮಾಡಿಕೊಂಡರೆ, ಅವರ ಖಾತೆಯಿಂದ ಹಣ ಲಪಟಾಯಿಸಲಾಗುತ್ತದೆ.
ವಂಚಕರು ಕಳಿಸುವ ಎಪಿಕೆ ಫೈಲ್ ಮಾಲ್ ವೇರ್ ಗಳಿಂದ ಕೂಡಿರುತ್ತದೆ. ಆ ಫೈಲ್ ಇನ್ ಸ್ಟಾಲ್ ಮಾಡಿಕೊಂಡರೆ ನಮ್ಮ ಇಡೀ ಮೊಬೈಲ್ ಹ್ಯಾಕ್ ಆಗುತ್ತದೆ. ಆಗ ವಂಚಕರು ನಮ್ಮ ಮೊಬೈಲ್ ಮೂಲಕವೇ ನಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ವರ್ಗಾವಣೆ ಮಾಡಿಕೊಳ್ಳುತ್ತಾರೆ. ಬೆಂಗಳೂರು ಸೇರಿ ಹಲವೆಡೆ ಇಂತಹ ಪ್ರಕರಣಗಳು ದಾಖಲಾಗಿವೆ.
ಹಾಗಾಗಿ, ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು. ವಾಟ್ಸ್ ಆ್ಯಪ್ ಸೇರಿ ಯಾವುದೇ ಮಾಧ್ಯಮದ ಮೂಲಕ ಅನಾಮಧೇಯ ವ್ಯಕ್ತಿಗಳು ಕಳುಹಿಸುವ ಲಿಂಕ್ ಗಳ ಮೇಲೆ ಕ್ಲಿಕ್ ಮಾಡಬಾರದು. ಯಾರಿಗೂ ಒಟಿಪಿಗಳನ್ನು ಶೇರ್ ಮಾಡಬಾರದು ಎಂದು ಸೈಬರ್ ತಜ್ಞರು ತಿಳಿಸಿದ್ದಾರೆ.
ಇದನ್ನೂ ಓದಿ; ಐಫೋನ್ ಏರ್‌ಗೆ ಸವಾಲು: ಹುವಾವೇಯಿಂದ 6.6mm ಸ್ಲಿಮ್ ‘ಮೇಟ್ 70 ಏರ್’ ಬಿಡುಗಡೆ!



















