ಬೆಂಗಳೂರು: ಹುಸಿ ಬಾಂಬ್ ಬೆದರಿಕೆ ಪ್ರಕರಣ ಹೆಚ್ಚಳ ಹಿನ್ನೆಲೆ ಬುಧವಾರವಷ್ಟೇ ರಾಜ್ಯ ಸರ್ಕಾರ ಎಸ್ಐಟಿ ರಚನೆ ಮಾಡಿತ್ತು. ಅದರ ಬೆನ್ನಲ್ಲೇ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಮನೆಯನ್ನು ಸ್ಪೋಟಿಸುವುದಾಗಿ ಈಮೇಲ್ ಬೆದರಿಕೆ ಸಂದೇಶವೊಂದು ಬಂದಿದೆ.
ತಮಿಳುನಾಡಿನ ವ್ಯಕ್ತಿಯೋರ್ವನಿಂದ ಬೆದರಿಕೆ ಸಂದೇಶ ಕಳುಹಿಸಿರುವ ಅನುಮಾನಗಳು ವ್ಯಕ್ತವಾಗಿದ್ದು, ಆತನ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.
ಆರ್ನಾ ಅಶ್ವಿನ್ ಶೇಖರ್ (aarna.ashwinshekher@outlook.com) ಎಂಬಾತನ ಐಡಿಯಿಂದ ಡಿಸಿಎಂ ಡಿಕೆ ಶಿವಕುಮಾರ್ ಇ-ಮೇಲ್ ಐಡಿಗೆ ಬಾಂಬ್ ಬೆದರಿಕೆ ಸಂದೇಶ ಕಳುಹಿಸಲಾಗಿದ್ದು,
ಆರು ಆರ್‌ಡಿಎಕ್ಸ್ ಫಿಕ್ಸ್ ಮಾಡಿದ್ದೇವೆ ಎಂದು dkshivakumar1 ಜಿಮೇಲ್‌ಗೆ ಬೆದರಿಕೆ ಇ-ಮೇಲ್ ಸಂದೇಶ ಬಂದ ಹಿನ್ನಲೆ, ತಕ್ಷಣ ಬಾಂಬ್ ಸ್ಕ್ವಾಡ್ ಸಿಎಂ ಹಾಗೂ ಡಿಸಿಎಂ ನಿವಾಸಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
arnaashinkumar ಎಂಬ ಜಿಮೇಲ್ ಐಡಿಯಿಂದ ಈ ಬೆದರಿಕೆ ಸಂದೇಶ ಬಂದಿದ್ದು, ಇದು ಹುಸಿ ಬಾಂಬ್ ಕರೆ ಎಂದು ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ. ಅಶ್ವಥ್ ನಾರಾಯಣಸ್ವಾಮಿ ಎಂಬವರ ದೂರು ಆಧರಿಸಿ ಪ್ರಕರಣ ದಾಖಲಾಗಿದೆ.
ಈ ಮೊದಲು ಹೈಕೋರ್ಟ್‌ಗೂ ಇಂಥ ಬಾಂಬ್ ಬೆದರಿಕೆ ಕರೆ ಬಂದಿತ್ತು. ಬೆಂಗಳೂರು ಅಂತಾರಾಷ್ಟ್ರೀಯ ಏರ್‌ಪೋರ್ಟ್‌ಗೆ, ಖಾಸಗಿ ಶಾಲೆಗಳಿಗೆ ಇಂಥ ಬೆದರಿಕೆ ಬರುವುದು ಮಾಮೂಲಾಗಿದೆ. ಇದೀಗ ಸಿಎಂ, ಡಿಸಿಎಂ ಮನೆಗಳನೂ ಕಿಡಿಗೇಡಿಗಳು ಟಾರ್ಗೆಟ್ ಮಾಡಿದ್ದಾರೆ.