ಬೆಂಗಳೂರು: ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯ (ಇಪಿಎಫ್ಒ) ಸದಸ್ಯರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಪಿಎಫ್ ಖಾತೆಯಲ್ಲಿರುವ ಹಣವನ್ನು ಮತ್ತೊಂದು ಖಾತೆಗೆ ವರ್ಗಾವಣೆ ಮಾಡಲು ಕಂಪನಿಯ ಅನುಮತಿ ಬೇಕಿಲ್ಲ ಎಂದು ಇಪಿಎಫ್ಒ ಅಧಿಸೂಚನೆ ಹೊರಡಿಸಿದೆ. ಇದರಿಂದಾಗಿ, ಕಂಪನಿ ಬದಲಿಸಿದ ಕೋಟ್ಯಂತರ ಉದ್ಯೋಗಿಗಳಿಗೆ ಅನುಕೂಲವಾಗಲಿವೆ.
ಇದಕ್ಕೂ ಮೊದಲು, ಒಬ್ಬ ಉದ್ಯೋಗಿಯು ಒಂದು ಕಂಪನಿಯನ್ನು ಬಿಟ್ಟು, ಬೇರೊಂದು ಕಂಪನಿಯನ್ನು ಸೇರಿದರೆ, ಮೊದಲಿನ ಕಂಪನಿಯ ಪಿಎಫ್ ಮೊತ್ತವನ್ನು ಹೊಸ ಕಂಪನಿಯ ಪಿಎಫ್ ಖಾತೆಗೆ ಜಮೆ ಮಾಡಲು ಮೊದಲಿನ ಕಂಪನಿಯ ಅನುಮತಿ ಬೇಕಿತ್ತು. ಆದರೆ, ಪಿಎಫ್ ಸದಸ್ಯರಿಗೆ ಅನುಕೂಲವಾಗಲಿ ಎಂದು ಈಗ ಇಪಿಎಫ್ಒ ಹೊಸ ನಿಯಮ ಜಾರಿಗೆ ತಂದಿದೆ.
ದೇಶದಲ್ಲಿ ಪ್ರತಿ ವರ್ಷ ಇಪಿಎಫ್ಒ ಸದಸ್ಯರು ಸುಮಾರು 90 ಸಾವಿರ ಕೋಟಿ ರೂಪಾಯಿ ವರ್ಗಾವಣೆಗೆ ಅರ್ಜಿ ಸಲ್ಲಿಸುತ್ತಾರೆ. ಪ್ರತಿ ಬಾರಿಯೂ ಮೊದಲಿನ ಕಂಪನಿಯ ಅನುಮತಿ ಪಡೆಯಬೇಕಾಗಿದ್ದರಿಂದ ವರ್ಗಾವಣೆಗೆ ಹೆಚ್ಚಿನ ಸಮಯ ಬೇಕಾಗುತ್ತಿತ್ತು. ಹಾಗಾಗಿಯೇ, ಹೊಸ ನಿಯಮ ಜಾರಿಗೆ ತರಲಾಗಿದೆ ಎಂದು ತಿಳಿದುಬಂದಿದೆ. ಹೊಸ ನಿಯಮದಿಂದ ಸುಮಾರು 1.25 ಕೋಟಿ ಸದಸ್ಯರಿಗೆ ಅನುಕೂಲವಾಗಲಿದೆ ಎಂದು ಇಪಿಎಫ್ಒ ತಿಳಿಸಿದೆ.
ಇಪಿಎಫ್ಒ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಸದಸ್ಯರು ಈಗ ಒಂದು ಖಾತೆಯಿಂದ ಮತ್ತೊಂದು ಖಾತೆಗೆ ಹಣ ವರ್ಗಾವಣೆ ಮಾಡಲು ಅರ್ಜಿ ಸಲ್ಲಿಸಬಹುದಾಗಿದೆ. ದೇಶಾದ್ಯಂತ ಇಪಿಎಫ್ಒಗೆ ಸುಮಾರು 7 ಕೋಟಿ ಸದಸ್ಯರು ಇದ್ದಾರೆ. ಶೀಘ್ರದಲ್ಲೇ, ಎಟಿಎಂಗಳ ಮೂಲಕ ಪಿಎಫ್ ಮೊತ್ತವನ್ನು ವಿತ್ ಡ್ರಾ ಮಾಡುವ ವ್ಯವಸ್ಥೆಗೆ ಇಪಿಎಫ್ಒ ಚಾಲನೆ ನೀಡಲಿದೆ. ಮೇ ಅಥವಾ ಜೂನ್ ನಲ್ಲಿ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಹೇಳಲಾಗುತ್ತಿದೆ.