ಬೆಂಗಳೂರು: ಶಾಸಕ ಮುನಿರತ್ನ ವಿರುದ್ಧ ಮತ್ತೊಂದು ಅಟ್ರಾಸಿಟಿ ಕೇಸ್ ದಾಖಲಾಗಿದೆ. ಈ ಕುರಿತು ನಗರ ಪೊಲೀಸ್ ಆಯುಕ್ತ ದಯಾನಂದ್(Dayanand) ಸ್ಪಷ್ಟನೆ ನೀಡಿದ್ದಾರೆ.
ಶಾಸಕ ಮುನಿರತ್ನ ವಿರುದ್ಧ ಆರ್ ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ಅಡಿ ಮಂಗಳವಾರ ಪ್ರಕರಣ ದಾಖಲಾಗಿದೆ. ಈ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದಾರೆ ಎಂದು ಹೇಳಿದ್ದಾರೆ.
ಬೆಂಗಳೂರಿನ ಪೀಣ್ಯ ಪ್ರಥಮ ದರ್ಜೆ ಕಾಲೇಜಿನ (Peenya First Class College) ಬಳಿಯಿರುವ ಅಕ್ಕಮಹಾದೇವಿ ಸ್ಲಂನಲ್ಲಿ ವಾಸಿಸುತ್ತಿದ್ದ ದಿನಗೂಲಿ ಕಾರ್ಮಿಕರ ಮೇಲೆ ದೌರ್ಜನ್ಯ ಎಸಗಿದ್ದಾರೆಂಬ ಆರೋಪ ಕೇಳಿ ಬಂದಿದೆ. ಈ ಸ್ಲಂನಲ್ಲಿ ಸುಮಾರು 50ಕ್ಕೂ ಅಧಿಕ ಕುಟುಂಬಗಳು ವಾಸಿಸುತ್ತಿದ್ದರು. ಆದರೆ, ಶಾಸಕ ಮುನಿರತ್ನ ಮತ್ತು ಸಹಚರರು ಜೆಸಿಬಿ ತಂದು ಏಕಾಏಕಿ ಎಲ್ಲರ ಮನೆ ನೆಲಸಮ ಮಾಡಿದ್ದಾರೆ. ಹೀಗಾಗಿ ಕಾರ್ಮಿಕರ ಕುಟುಂಬಗಳು ಬೀದಿಗೆ ಬಂದಿವೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ.
ವಸಂತ್ ಕುಮಾರ್, ಚನ್ನಕೇಶವ, ನವೀನ್, ರಾಮ , ಕಿಟ್ಟಿ , ಗಂಗಾ ಎಂಬುವವರು ಬಂದು ಮನೆ ನೆಲಸಮ ಮಾಡಿಸಿದ್ದಾರೆಂದು ದೂರು ದಾಖಲಿಸಲಾಗಿದೆ. ನೆಲಸಮ ಮಾಡಿದ ವೇಳೆ ಒಂದೊಂದು ಮನೆಯಲ್ಲಿ ಕೂಡಿಟಿದ್ದ 20 ರಿಂದ 70 ಸಾವಿರ ರೂ. ಹಣ, 30 ಗ್ರಾಂ ಚಿನ್ನಾಭರಣ ಮಣ್ಣು ಪಾಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಶಾಸಕ ಮುನಿರತ್ನ ತಮ್ಮ ರಾಜಕೀಯ ಪ್ರಭಾವ ಬಳಸಿ ಕೂಲಿ ಕಾರ್ಮಿಕರ ಮೇಲೆ ದರ್ಪ ತೋರಿದ್ದಾರೆಂದು ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿ ದೂರು ನೀಡಿದ್ದಾರೆ.