ಬೆಂಗಳೂರು | ಕರ್ನಾಟಕದಲ್ಲಿ ಮಹಿಳಾ ಸರ್ಕಾರಿ ನೌಕರರಿಗೆ ಋತುಚಕ್ರದ ಸಮಯದಲ್ಲಿ ಮಾಸಿಕ ಒಂದು ದಿನದ ವೇತನ ಸಹಿತ ರಜೆ ಸೌಲಭ್ಯ ಒದಗಿಸುವ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿರುವ ಅಧಿಸೂಚನೆಯನ್ನು ಮಾರ್ಪಡಿಸುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದಿದ್ದಾರೆ. ಋತುಚಕ್ರದ ರಜೆಯನ್ನು ಮಹಿಳಾ ಸರ್ಕಾರಿ ನೌಕರರಿಗೆ ಮಾತ್ರವಲ್ಲದೇ ಎಲ್ಲಾ ವಲಯಗಳಲ್ಲೂ ಕೆಲಸ ನಿರ್ವಹಿಸುತ್ತಿರುವ ಮಹಿಳೆಯರಿಗೆ ವಿಸ್ತರಿಸಿ & ಆದೇಶಿಸಿ ಎಂದು ನಾಗಲಕ್ಷ್ಮಿ ಚೌಧರಿ ಅವರು ಮನವಿ ಮಾಡಿದ್ದಾರೆ.
ಪತ್ರದಲ್ಲೇನಿದೆ?
ಕರ್ನಾಟಕ ಸರ್ಕಾರವು ಋತುಚಕ್ರದ ರಜೆ ನೀತಿ-2025 ಜಾರಿಗೊಳಿಸಿ ಆದೇಶಿಸಿರುತ್ತದೆ. ಪ್ರಸ್ತುತ ಆದೇಶದಲ್ಲಿ ಉಲ್ಲೇಖಿಸಿರುವಂತೆ, ಕ್ರಮ ಸಂಖ್ಯೆ 3ರ ಸಚಿವ ಸಂಪುಟ ಟಿಪ್ಪಣಿಯಲ್ಲಿ “ರಾಜ್ಯದಾದ್ಯಂತ ಸರ್ಕಾರಿ ಕಛೇರಿಗಳು, ಗಾರ್ಮೆಂಟ್ಸ್, MNCಗಳು IT ಮತ್ತು ಇತರ ಖಾಸಗಿ ಕೈಗಾರಿಕೆಗಳು ಸೇರಿದಂತೆ ಎಲ್ಲಾ ವಲಯಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಪ್ರತಿ ತಿಂಗಳು ಒಂದು ದಿನದ ವೇತನ ಸಹಿತ ರಜೆ ನೀಡುವ “ಋತು ಚಕ್ರದ ರಜೆ ನೀತಿ-2025” ಅನ್ನು ಜಾರಿಗೆ ತರಲು “ಸಚಿವ ಸಂಪುಟವು ಅನುಮೋದಿಸಿರುತ್ತದೆ.

ಪ್ರಸ್ತುತ ಋತುಚಕ್ರದ ರಜೆ ಆದೇಶದಲ್ಲಿ ಕಾಯ್ದೆಗಳನ್ನು ಹೆಸರಿಸಿ ಕಾಯ್ದೆಗಳಡಿಯಲ್ಲಿ “ನೊಂದಣಿಯಾಗಿರುವ 18ರಿಂದ 52 ವರ್ಷದ ವಯೋಮಿತಿಯ ಎಲ್ಲಾ ಖಾಯಂ, ಗುತ್ತಿಗೆ, ಹೊರಗುತ್ತಿಗೆ ಮಹಿಳಾ ನೌಕರರಿಗೆ” ಎಂದು ಮಾತ್ರ ಇದ್ದು, ಹೆಸರಿಸಿದ ಕಾಯ್ದೆಗಳಡಿಯಲ್ಲಿ ಬರದ “ಎಲ್ಲಾ ವಲಯಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ” ಅನ್ವಯವಾಗುತ್ತಿಲ್ಲ.
ಇದರಿಂದ ಕರ್ನಾಟಕದಾದ್ಯಂತ ಇರುವ ಅನುದಾನಿತ, ಅನುದಾನರಹಿತ ಶಾಲಾ ಕಾಲೇಜುಗಳ ಶಿಕ್ಷಕಿಯರು. ಕಾಲೇಜು ಉಪನ್ಯಾಸಕಿಯರು, ಅಧ್ಯಾಪಕರು ಹಾಗೂ ಆರೋಗ್ಯ ಇಲಾಖೆಯಡಿಯಲ್ಲಿ ಬರುವ ಕೆಲವು ಶುಶೂಷಕಿಯರು, ಅಧಿಕಾರಿಗಳಿಗೆ ಈ ಆದೇಶದ ಪ್ರಯೋಜನವು ಸಿಗುತ್ತಿರುವುದಿಲ್ಲ. ಖಾಸಗಿ ಹಾಗೂ ಅನುದಾನಿತ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರು ಆಯಾ ಸಂಸ್ಥೆಯ ಮುಖ್ಯಸ್ಥರುಗಳು ನಮ್ಮ ಸಂಸ್ಥೆಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಈ ಆದೇಶವು ಅನ್ವಯಿಸುವುದಿಲ್ಲ ಎಂದು ರಜೆಯನ್ನು ನಿರಾಕರಿಸುತ್ತಿರುವ ಅಂಶವನ್ನು ಆಯೋಗದ ಗಮನಕ್ಕೆ ತಂದು, ಆದೇಶದಲ್ಲಿ ಎಲ್ಲಾ ವಲಯಗಳ, ಸಂಸ್ಥೆಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೂ ಅನ್ವಯಿಸುವಂತೆ ಆದೇಶ ಮಾರ್ಪಡಿಸಲು ಕೋರಿ ನಮಗೆ ಮನವಿ ಮಾಡಿರುತ್ತಾರೆ.
ಹಾಗಾಗಿ, ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ, ಖಾಸಗಿ, ಅನುದಾನರಹಿತ, ಅನುದಾನಿತ ಎಲ್ಲಾ ವಲಯಗಳ ಸಂಸ್ಥೆಗಳು, ಕಾರ್ಖಾನೆ, ಕೈಗಾರಿಕೆ, ಸಣ್ಣ ಕೈಗಾರಿಕೆ, MNC ಮುಂತಾದ ಎಲ್ಲಾ ವಲಯಗಳಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ವರ್ಗದ ಮಹಿಳೆಯರಿಗೆ ಅನ್ವಯವಾಗುವಂತೆ ಆದೇಶದಲ್ಲಿ ಸೇರ್ಪಡೆ ಮಾಡಿ ಮರು ಆದೇಶ ಹೊರಡಿಸಬೇಕೆಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರಿಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ : SIT ತನಿಖೆಯಲ್ಲಿ ಬುರುಡೆ ಟೀಂ ಪಿತೂರಿ ಬಯಲು | ಧರ್ಮಸ್ಥಳಕ್ಕೆ ಕಳಂಕ ಮೆತ್ತಲು ಬಂದವರೇ ಬೆತ್ತಲಾದ್ರಾ?



















